ಮುಂಬೈ ವಿರುದ್ಧ ಅಬ್ಬರಿಸಿದ ಧೋನಿ

ಮುಂಬೈ, ಮೇ 17: ಸ್ಟಾರ್ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದಾಗ ಹೆಚ್ಚು ಸುದ್ದಿಯಾಗುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ಎಂಎಸ್ ಧೋನಿ. ಮುಂಬೈ ವಿರುದ್ಧ ಮಂಗಳವಾರ ನಡೆದ ಐಪಿಎಲ್‌ನ ಕ್ವಾಲಿಫೈಯರ್-1 ಪಂದ್ಯದಲ್ಲಿ ಪುಣೆ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಾತ್ರವಲ್ಲ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪುಣೆ ತಂಡ ಆರಂಭಿಕ ಕುಸಿತಕ್ಕೆ ಒಳಗಾಗಿತ್ತು. ಅಜಿಂಕ್ಯ ರಹಾನೆ ಹಾಗೂ ಮನೋಜ್ ತಿವಾರಿ 3ನೆ ವಿಕೆಟ್‌ನಲ್ಲಿ ಅರ್ಧಶತಕ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದರೂ ಧೋನಿ ಇನಿಂಗ್ಸ್‌ನ ಕೊನೆಯ 2 ಓವರ್‌ಗಳಲ್ಲಿ ಪಂದ್ಯದ ಚಿತ್ರಣ ಬದಲಿಸಿದ್ದರು.
ಮಂದಗತಿಯ ವಾಂಖೆಡೆ ಸ್ಟೇಡಿಯಂ ಪಿಚ್‌ನಲ್ಲಿ ಅಂತಿಮ 12 ಎಸೆತಗಳಲ್ಲಿ 5 ಸಿಕ್ಸರ್‌ಗಳ ಸಹಾಯದಿಂದ 40 ರನ್ ಗಳಿಸಿದ್ದ ಧೋನಿ ಪುಣೆ ತಂಡ ಎರಡು ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ 162 ರನ್ ಗಳಿಸಲು ನೆರವಾಗಿದ್ದರು. ಮುಂಬೈ ಇಂಡಿಯನ್ಸ್‌ನ ತವರು ಮೈದಾನದಲ್ಲಿ ಧೋನಿ ಬ್ಯಾಟಿಂಗ್‌ಗೆ ಇಳಿದಾಗ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಧೋನಿ ಪ್ರತಿ ರನ್ ಬಾರಿಸಿದಾಗಲೂ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಯಿತು.
ಭಾರತದ ಮಾಜಿ ನಾಯಕ ಧೋನಿ ಮೊದಲಿಗೆ 18 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದ್ದರು. ಮೆಕ್ಲಿನಘನ್ ಹಾಗೂ ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ತಲಾ ಎರಡು ಭರ್ಜರಿ ಸಿಕ್ಸರ್ ಎತ್ತಿದ ಧೋನಿ 26 ಎಸೆತಗಳಲ್ಲಿ ಔಟಾಗದೆ 40 ರನ್ ಗಳಿಸಿದರು. ಆರ್‌ಪಿಎಸ್ ತಂಡ ಮುಂಬೈ ಗೆಲುವಿಗೆ 163 ರನ ಗುರಿ ನೀಡಲು ನೆರವಾಗಿದ್ದರು.
ಗೆಲುವಿಗೆ ಕಠಿಣ ಸವಾಲು ಪಡೆದಿದ್ದ ಮುಂಬೈ ಉತ್ತಮ ಆರಂಭವನ್ನು ಪಡೆದಿದ್ದರೂ 20 ರನ್‌ಗಳಿಂದ ಸೋತಿತ್ತು. ಪುಣೆ ತಂಡ ಮುಂಬೈ ವಿರುದ್ಧ ಈ ವರ್ಷ ಆಡಿರುವ ಸತತ 3ನೆ ಪಂದ್ಯದಲ್ಲೂ ಜಯ ಸಾಧಿಸಿ ಹ್ಯಾಟ್ರಿಕ್ ಸಾಧಿಸಿತು.







