ನೂರನೆ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ ಸುನೀತಾ ಲಾಕ್ರಾ

ಹ್ಯಾಮಿಲ್ಟನ್, ಮೇ 17: ಭಾರತದ ಪ್ರಮುಖ ಹಾಕಿ ಡಿಫೆಂಡರ್ ಸುನೀತಾ ಲಾಕ್ರಾ ದೇಶದ ಪರ 100ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಹೊಸ ಮೈಲುಗಲ್ಲು ತಲುಪಿದರು.
ಬುಧವಾರ ನ್ಯೂಝಿಲೆಂಡ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಸುನೀತಾ ‘ಸೆಂಚುರಿ’ ಪೂರೈಸಿದರು.
2009ರಲ್ಲಿ ಅಂತಾರಾಷ್ಟ್ರೀಯ ಹಾಕಿ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದ ಸುನೀತಾ ಆನಂತರ ಭಾರತೀಯ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಪ್ರಸ್ತುತ ನ್ಯೂಝಿಲೆಂಡ್ ಪ್ರವಾಸದಲ್ಲಿ ದೀಪಾ ಎಕ್ಕಾ, ನಮಿತಾ ಟೊಪ್ಪೊ, ಸುಶೀಲಾ ಚಾನು, ಉದಿತಾ ಹಾಗೂ ಗುರ್ಜಿತ್ ಕೌರ್ ಅವರೊಂದಿಗೆ ಡಿಫೆನ್ಸ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.
ಒಡಿಶಾದಲ್ಲಿ ಜನಿಸಿರುವ ಸುನೀತಾ 17ನೆ ಆವೃತ್ತಿಯ ಏಷ್ಯನ್ ಗೇಮ್ಸ್, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದರು. ಕೆನಡಾದಲ್ಲಿ ನಡೆದಿದ್ದ ನಾಲ್ಕನೆ ಆವೃತ್ತಿಯ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಗೂ ಮಹಿಳಾ ಹಾಕಿ ವರ್ಲ್ಡ್ ಲೀಗ್ ರೌಂಡ್-2ರಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
‘‘ಸುನೀತಾ ಅತ್ಯಂತ ಕಠಿಣ ಪರಿಶ್ರಮಿ ಹಾಗೂ ಪ್ರತಿಭಾವಂತ ಆಟಗಾರ್ತಿ. ಹಲವು ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಂದು 100ನೆ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ ಸುನೀತಾಗೆ ಅಭಿನಂದನೆಗಳು. ಸುನೀತಾ ಒಡಿಶಾದ ಯುವ, ಸುಪ್ತ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದು, ದೇಶದ ಇತರ ಭಾಗದ ಕ್ರೀಡಾಳುಗಳು ಹಾಕಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಪ್ರೇರಣೆಯಾಗಿದ್ದಾರೆ’’ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಅಹ್ಮದ್ ತಿಳಿಸಿದ್ದಾರೆ.







