ಶರಪೋವಾಗೆ ಫ್ರೆಂಚ್ ಓಪನ್ ವೈರ್ಲ್ಡ್‌ಕಾರ್ಡ್ ನಿರಾಕರಣೆ

ಪ್ಯಾರಿಸ್, ಮೇ 17: ಫ್ರೆಂಚ್ ಟೆನಿಸ್ ಫೆಡರೇಶನ್ ಎರಡು ಬಾರಿಯ ಚಾಂಪಿಯನ್ ಮರಿಯಾ ಶರಪೋವಾಗೆ ವೈರ್ಲ್ಡ್‌ಕಾರ್ಡ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಫ್‌ಎಫ್‌ಟಿ ಅಧ್ಯಕ್ಷ ಬೆರ್ನಾರ್ಡ್ ತಿಳಿಸಿದ್ದಾರೆ.
‘‘ವಿಶ್ವದ ಮಾಜಿ ನಂ.1 ಆಟಗಾರ್ತಿ ಶರಪೋವಾ 15 ತಿಂಗಳ ಡೋಪಿಂಗ್ ನಿಷೇಧದ ಶಿಕ್ಷೆಯನ್ನು ಪೂರೈಸಿ ಕಳೆದ ತಿಂಗಳಷ್ಟೇ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದಾರೆ. ಅವರು ಸತತ ಎರಡನೆ ಬಾರಿ ಫ್ರೆಂಚ್ ಓಪನ್‌ನಿಂದ ವಂಚಿತರಾಗಲಿದ್ದಾರೆ. 2012 ಹಾಗೂ 2014ರಲ್ಲಿ ಚಾಂಪಿಯನ್ ಆಗಿರುವ ಶರಪೋವಾರ ಸಾಧನೆಯನ್ನು ಯಾರೂ ಕಡೆಗಣಿಸುವಂತಿಲ್ಲ. ಆದರೆ, ಅವರಿಗೆ ವೈರ್ಲ್ಡ್‌ಕಾರ್ಡ್ ನೀಡಲು ಸಾಧ್ಯವಿಲ್ಲ. ಗಾಯದಿಂದ ಚೇತರಿಸಿಕೊಂಡು ವಾಪಸಾಗುವ ಆಟಗಾರರಿಗೆ ವೈರ್ಲ್ಡ್‌ಕಾರ್ಡ್ ನೀಡಲಾಗುತ್ತದೆ. ಡೋಪಿಂಗ್ ಬ್ಯಾನ್‌ನಿಂದ ಮರಳಿದವರಿಗೆ ಅದನ್ನು ನೀಡಲಾಗುವುದಿಲ್ಲ’’ ಎಂದು ಬೆರ್ನಾರ್ಡ್ ತಿಳಿಸಿದ್ದಾರೆ.
ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾಗೆ ನಿಷೇಧಿತ ಉದ್ದೀಪನಾ ದ್ರವ್ಯ ಮೆಲ್ಡೋನಿಯಂ ಸ್ವೀಕರಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ ಎರಡು ವರ್ಷ ನಿಷೇಧ ಹೇರಿತ್ತು. ಕ್ರೀಡಾ ವ್ಯಾಜ್ಯ ಇತ್ಯರ್ಥ ನ್ಯಾಯಾಲಯ ನಿಷೇಧದ ಅವಧಿಯನ್ನು 15 ತಿಂಗಳಿಗೆ ಕಡಿತಗೊಳಿಸಿತ್ತು. ಎ.26 ರಂದು ನಿಷೇಧದ ಅವಧಿ ಕೊನೆಗೊಂಡ ಬಳಿಕ ರಶ್ಯದ ಆಟಗಾರ್ತಿ ಶರಪೋವಾ ಸ್ಟಟ್‌ಗರ್ಟ್ ಓಪನ್‌ನಲ್ಲಿ ಸ್ಪರ್ಧಿಸಿದ್ದರು. ಆ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಮ್ಯಾಡ್ರಿಡ್ ಓಪನ್‌ನಲ್ಲಿ ಅಂತಿಮ 32ರ ಸುತ್ತಿಗೆ ತೇರ್ಗಡೆಯಾಗಿದ್ದರು.







