ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಕೊರತೆ: ನೆಲದಲ್ಲಿ ಮಲಗಿದ್ದ ನವಜಾತ ಶಿಶುವಿಗೆ ಕಚ್ಚಿದ ಇಲಿ!

ಭೋಪಾಲ್, ಮೇ 18: ತಾಯಿಯ ಜೊತೆ ಮಲಗಿದ್ದ ನವಜಾತ ಶಿಶುವಿಗೆ ಇಲಿಯೊಂದು ಕಚ್ಚಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಕುಮ್ಹರಾವ ಗ್ರಾಮದ ಸುನೀತಾ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿ ಮಗುವೊಂದಕ್ಕೆ ಜನ್ಮ ನೀಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ತಾಯಿ ಮತ್ತು ಮಗು ನೆಲದಲ್ಲೇ ಮಲಗಬೇಕಾಯಿತು. ರಾತ್ರಿ ಮಲಗಿದ್ದ ವೇಳೆ ಮಗುವಿನ ಕೈಯಿಂದ ರಕ್ತ ಒಸರುತ್ತಿರುವುದನ್ನು ಕಂಡು ಹೆದರಿದ ಸುನೀತಾ ಸುತ್ತಮುತ್ತ ಗಮನಿಸಿದಾಗ ಮಗುವಿನ ಸಮೀಪವಿದ್ದ ಇಲಿಯೊಂದು ಓಡಿಹೋಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ರೀಜನಲ್ ಮೆಡಿಕಲ್ ಆಫಿಸರ್ ಗುಜ್ಜಾರ್, ಮಗುವಿನ ಕೈಯಲ್ಲಿ ಕಚ್ಚಿದ ಗಾಯದ ಗುರುತುಗಳಿವೆ ಎನ್ನುವುದನ್ನು ಒಪ್ಪಿಕೊಂಡರೂ ಇದು ಇಲಿ ಕಚ್ಚಿದ ಗುರುತುಗಳು ಎಂದು ಹೇಳಲಾಗುವುದಿಲ್ಲ ಎಂದಿದ್ದಾರೆ.
“ಶಿಶುವಿಗೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಇಂಜೆಕ್ಷನ್ ಗಳನ್ನು ನೀಡಲಾಗಿದ್ದು, ಮಗು ಆರೋಗ್ಯದಿಂದಿದೆ” ಎಂದಿದ್ದಾರೆ.
Next Story





