ಆರೆಸ್ಸೆಸ್ಸಿಗರ ದಾಳಿಯನ್ನು ಸಿಪಿಎಂ ತಲೆಗೆ ಕಟ್ಟಿದ ಫೇಕ್ ಟ್ವೀಟ್: ಸಂಸದ ರಾಜೀವ್ ಚಂದ್ರಶೇಖರ್ ವಿರುದ್ಧ ದೂರು ದಾಖಲು

ಹೊಸದಿಲ್ಲಿ, ಮೇ 18: ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಆ್ಯಂಬುಲೆನ್ಸ್ ಒಂದರ ಮೇಲೆ ನಡೆಸಿದ ದಾಳಿಯನ್ನು ಸಿಪಿಎಂ ಕಾರ್ಯಕರ್ತರು ನಡೆಸಿದ ದಾಳಿಯೆಂದು ಹೇಳುವ ಫೇಕ್ ಟ್ವೀಟೊಂದನ್ನು ರಿಟ್ವೀಟ್ ಮಾಡಿದ ರಾಜ್ಯಸಭಾ ಸದಸ್ಯ ಹಾಗೂ ರಿಪಬ್ಲಿಕ್ ಟಿವಿ ಮತ್ತು ಏಷ್ಯಾನೆಟ್ ನ್ಯೂಸ್ ಮಾಲಕ ರಾಜೀವ್ ಚಂದ್ರಶೇಖರ್ ತೊಂದರೆಯಲ್ಲಿ ಸಿಲುಕಿದ್ದಾರೆ. ಇದೀಗ ಅವರ ವಿರುದ್ಧ ಐಪಿಸಿ ಸೆಕ್ಷನ್ 153(ಎ) ಅನ್ವಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೊಲೀಸ್ ದೂರು ದಾಖಲಿಸಲಾಗಿದೆ.
ಅವರು ರಿಟ್ವೀಟ್ ಮಾಡಿದ ಮೂಲ ಟ್ವೀಟನ್ನು ಜಯಕೃಷ್ಣನ್ @ಸಾವರ್ಕರ್5200 ಎಂಬವರು ಮೇ 13ರಂದು ಮಾಡಿದ್ದರು. ಆ್ಯಂಬುಲೆನ್ಸ್ ಒಂದು ಮಾರ್ಕ್ಸಿಸ್ಟರಿಂದ ದಾಳಿಗೀಡಾಗಿದ್ದು, ಅದರಲ್ಲಿ ಹತ್ಯೆಗೀಡಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಬಿಜು ಅವರ ಮೃತದೇಹ ಕೊಂಡೊಯ್ಯಲಾಗುತ್ತಿತ್ತು ಎಂದು ಅವರ ಟ್ವೀಟ್ ಹೇಳಿತ್ತು. ಈ ಟ್ವೀಟನ್ನು ರಾಜೀವ್ ಚಂದ್ರಶೇಖರ್ ರಿಟ್ವೀಟ್ ಮಾಡಿದ್ದರು.
ಕಣ್ಣೂರಿನಲ್ಲಿ ಶನಿವಾರ ನಡೆದ ಹರತಾಳ ಸಂದರ್ಭ ಆರೆಸ್ಸೆಸ್ ಕಾರ್ಯಕರ್ತರು ಈ ಆ್ಯಂಬುಲೆನ್ಸ್ ಮೇಲೆ ದಾಳಿ ನಡೆಸಿದ್ದರೆಂಬುದು ನಂತರದ ವರದಿಗಳಿಂದ ತಿಳಿದು ಬಂದಿತು. ತೃಕ್ಕರಿಪುರದ ರೋಗಿಯೊಬ್ಬರನ್ನು ಹೊತ್ತಿದ್ದ ಈ ಆ್ಯಂಬುಲೆನ್ಸ್ ಪರಿಯಾರಂ ಮೆಡಿಕಲ್ ಕಾಲೇಜು ಆವರಣ ಪ್ರವೇಶಿಸಿದಾಕ್ಷಣ ಅದರ ಮೇಲೆ ದಾಳಿ ನಡೆದಿತ್ತು. ಆಸ್ಪತ್ರೆಯ ಲಾಬಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಕಂಡುಬಂದಂತೆ ಆರೆಸ್ಸೆಸ್ ಕಾರ್ಯಕರ್ತರ ದೊಡ್ಡ ಗುಂಪೊಂದು ಆ್ಯಂಬುಲೆನ್ಸ್ ಮೇಲೆ ದಾಳಿ ನಡೆಸಿತ್ತು. ಆಸ್ಪತ್ರೆಯ ಕ್ಯಾಶುವೆಲ್ಟಿ ವಿಭಾಗ ಕೂಡ ಈ ದಾಳಿಯಲ್ಲಿ ಹಾನಿಗೊಂಡಿತ್ತು. ತದನಂತರ ಕಣ್ಣೂರಿನ ಆ್ಯಂಬುಲೆನ್ಸ್ ಚಾಲಕರು ದಾಳಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಈ ಸಿಸಿಟಿವಿ ದೃಶ್ಯಾವಳಿ ಅಂತರ್ಜಾಲದಲ್ಲಿ ಹರಡಿದಾಗ ಜಯಕೃಷ್ಣನ್ ಅವರ ಟ್ವೀಟ್ ಮತ್ತು ರಾಜೀವ್ ಚಂದ್ರಶೇಖರ್ ಅವರ ರಿಟ್ವೀಟ್ ಕಾಣೆಯಾಗಿತ್ತು. ಆ ಒಂದು ದಿನದ ನಂತರ ಜಯಕೃಷ್ಣನ್ ಅವರ ಟ್ವಿಟ್ಟರ್ ಖಾತೆ ಕೂಡ ಮಾಯವಾಯಿತು. ಈ ಖಾತೆಯ ಹಿಂದೆ ನಿಜವಾಗಿಯೂ ಯಾರಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ.
ಬುಧವಾರ ಅವರ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ ನಂತರ ರಾಜೀವ್ ಟ್ವೀಟೊಂದನ್ನು ಮಾಡಿ ‘‘ನನ್ನನ್ನು ಬೆದರಿಸುವ ಎಡರಂಗ ಸರಕಾರದ ಯತ್ನಗಳಿಂದ ವಿನೋದವುಂಟಾಗಿದೆ. ನಾನು ಹೆದರುವುದಿಲ್ಲ,’’ ಎಂದು ಹೇಳಿದ್ದಾರೆ.
ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನೊಮ್ ರಾಜಶೇಖರನ್ ಅವರ ವಿರುದ್ಧವೂ ಟ್ವಿಟ್ಟರಿನಲ್ಲಿ ವಿಡಿಯೋ ಮೂಲಕ ಸುಳ್ಳು ಸುದ್ದಿ ಹರಡಿಸಿದ ಆರೋಪದ ಮೇಲೆ ಸೆಕ್ಷನ್ 153(ಎ)ಪ್ರಕರಣ ದಾಖಲಾಗಿದೆ. ಕಳೆದ ಶನಿವಾರ ಅವರು ವೀಡಿಯೋ ಒಂದನ್ನು ಪೋಸ್ಟ್ ಮಾಡಿ ‘‘ಕಣ್ಣೂರು ಕಮ್ಯುನಿಸ್ಟರು ಆರೆಸ್ಸೆಸ್ ಕಾರ್ಯಕರ್ತ ಬಿಜು ಅವರ ಹತ್ಯೆಯನ್ನು ಸಂಭ್ರಮಿಸುತ್ತಿದ್ದಾರೆ’’ ಎಂದು ಬರೆದಿದ್ದರು. ಈ ವಿಡಿಯೋವನ್ನು ಶನಿವಾರವೇ ತೆಗೆಯಲಾಗಿತ್ತೆಂಬುದಕ್ಕೆ ಪುರಾವೆಯೊದಗಿಸುವಂತೆ ಸಿಪಿಎಂ ನಾಯಕರು ಹೇಳಿದ್ದರೂ ಅವರು ಇಲ್ಲಿಯ ತನಕ ಅದನ್ನು ಒದಗಿಸಿಲ್ಲ.







