ಕರ್ನಾಟಕದ ಸಂಜಯ್ ಗುಬ್ಬಿಗೆ "ಗ್ರೀನ್ ಆಸ್ಕರ್"

ಬೆಂಗಳೂರು, ಮೇ 18: ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವವರಿಗೆ ನೀಡಲಾಗುವ "ಗ್ರೀನ್ ಆಸ್ಕರ್" ಎಂದೇ ಜನಪ್ರಿಯವಾಗಿರುವ "ವ್ಹಿಟ್ಲೀ ಪ್ರಶಸ್ತಿ"ಗೆ ಭಾರತದಿಂದ ಆಯ್ಕೆಯಾದ ಇಬ್ಬರಲ್ಲಿ ಕರ್ನಾಟಕದ ಸಂಜಯ್ ಗುಬ್ಬಿ ಅವರೂ ಸೇರಿದ್ದಾರೆ. ಅಸ್ಸಾಂ ರಾಜ್ಯದ ಪೂರ್ಣಿಮಾ ಬರ್ಮನ್ ಈ ಪ್ರಶಸ್ತಿ ಪಡೆದಿರುವ ಇನ್ನೊಬ್ಬರು.
ಇಂಗ್ಲೆಂಡ್ ಮೂಲದ ಚಾರಿಟಿ ಸಂಸ್ಥೆ ವ್ಹಿಟ್ಲಿ ಫಂಡ್ ಫಾರ್ ನೇಚರ್ ಈ ಪ್ರಶಸ್ತಿ ನೀಡುತ್ತಿದ್ದು, ಸಂಜಯ್ ಗುಬ್ಬಿ ಅವರು ಕರ್ನಾಟಕದ ಹುಲಿ ಕಾರಿಡಾರುಗಳ ಸಂರಕ್ಷಣೆಗೆ ಸಲ್ಲಿಸಿದ ಸೇವೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ವಿಜೇತರ ಹೆಸರುಗಳನ್ನು ಲಂಡನ್ನಿನಲ್ಲಿ ಬುಧವಾರ ಘೋಷಿಸಲಾಯಿತು. ಪ್ರಾಜೆಕ್ಟ್ ಫಂಡಿಂಗ್ ರೂಪದಲ್ಲಿ ಗುಬ್ಬಿಗೆ ಪ್ರಶಸ್ತಿ ರೂಪದಲ್ಲಿ 35,000 ಪೌಂಡ್ ದೊರೆಯಲಿದೆ. ವಿಶ್ವದಾದ್ಯಂತದ ಸುಮಾರು 169 ವನ್ಯಜೀವಿ ಸಂರಕ್ಷಕರಲ್ಲಿ ಸಂಜಯ್ ಗುಬ್ಬಿ ಹಾಗೂ ಪೂರ್ಣಿಮಾ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್ ಇಲ್ಲಿನ ವನ್ಯಜೀವಿ ತಜ್ಞ ಹಾಗೂ ವಿಜ್ಞಾನಿಯಾಗಿರುವ ಸಂಜಯ್ ಗುಬ್ಬಿ ಮೂಲತಃ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು ವನ್ಯಜೀವಿ ಸಂರಕ್ಷಣೆಯಲ್ಲಿ ಅವರಿಗಿದ್ದ ಆಸಕ್ತಿಯಿಂದಾಗಿ ಅವರು ಕ್ಯಾಂಟರ್ ಬರ್ರಿಯ ಯುನಿವರ್ಸಿಟಿ ಆಫ್ ಕೆಂಟ್ ಇಲ್ಲಿಂದ ಕನ್ಸರ್ವೇಶನ್ ಬಯಾಲಜಿಯಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರೂ ಆಗಿರುವ ಅವರು ತಳಮಟ್ಟದಲ್ಲಿ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿ ವಿಜೇತರಾಗಿರುವ ಗುಬ್ಬಿಯವರು ಮುಂದೆ ಎರಡು ಪ್ರಮುಖ ವನ್ಯಪ್ರಾಣಿ ಧಾಮಗಳಲ್ಲಿ ಅರಣ್ಯ ನಾಶ ತಡೆಯಲು ಶ್ರಮಿಸಲಿದ್ದಾರೆ.







