ಜಾಧವ್ ಗೂಢಚಾರನೆಂಬ ಆರೋಪ ಸಾಬೀತಾಗುವುದಿಲ್ಲ: ನ್ಯಾ.ರೋನಿ ಅಬ್ರಹಾಂ
ಗಲ್ಲು ಶಿಕ್ಷೆಗೆ ತಡೆ ಮುಂದಿನ ಆದೇಶ ಬರುವ ತನಕ ಮುಂದುವರಿಕೆ

ಹೇಗ್ , ಮೇ 18: ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಗೂಢಚಾರನೆಂಬ ಆರೋಪ ಸಾಬೀತಾಗುವುದಿಲ್ಲ' ಎಂದು ಇಂದು ತೀರ್ಪು ನೀಡಿದ್ದು ಇದರೊಂದಿಗೆ ಭಾರತಕ್ಕೆ ಐಸಿಜೆಯಲ್ಲಿ ಜಯ ಸಿಕ್ಕಿದೆ.
ಐಸಿಜೆ ನ್ಯಾಯಮೂರ್ತಿ ರೋನಿ ಅಬ್ರಹಾಂ ನೇತೃತ್ವದ 11 ಸದಸ್ಯರ ನ್ಯಾಯಪೀಠ ತೀರ್ಪು ಪ್ರಕಟಿಸಿತು. 'ಜಾಧವ್ ಬಂಧಿಸಿದ ಸಂದರ್ಭ ವಿವಾದಾತ್ಮಕವಾಗಿದೆ. ವಿಯೆನ್ನಾ ಒಪ್ಪಂದದ ಆಧಾರದಲ್ಲಿ ಭಾರತ ಮನವಿ ಸಲ್ಲಿಸಿದೆ.ಆದರೆ ಭಾರತದ ಮನವಿ ನಿರ್ದಿಷ್ಟ ಸಮಯಾವಕಾಶದಲ್ಲಿ ಇಲ್ಲ. ಜಾಧವ್ ಭಾರತೀಯ ಎನ್ನುವುದನ್ನು ಎರಡೂ ದೇಶಗಳು ಒಪ್ಪಿವೆ ವಿಯೆನ್ನಾಒಪ್ಪಂದ ಆಧಾರದಲ್ಲಿ ಕೌನ್ಸಿಲರ್ ಅವಕಾಶ ಸಿಗಬೇಕಿತ್ತು ಎಂದು ತೀರ್ಪು ಪ್ರಕಟಿಸಿದ ನ್ಯಾ. ಅಬ್ರಹಾಂ ಹೇಳಿದರು.
ಜಾಧವ್ ಅವರಿಗೆ ಮರಣದಂಡನೆ ವಿಧಿಸಿರುವುದನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಧವ್ ಅವರಿಗೆ ಮರಣದಂಡನೆ ವಿಧಿಸುವ ಪಾಕಿಸ್ತಾನದ ಸೇನಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಶಿಕ್ಷೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಎಂದು ಭಾರತ ಕೋರಿದ ಹತ್ತೇ ದಿನಗಳಲ್ಲಿ ಐಸಿಜೆ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಹದಿನಾರು ಬಾರಿ ಮನವಿ ಸಲ್ಲಿಸಿದ್ದರೂ ಜಾಧವ್ ಅವರಿಗೆ ಕೌನ್ಸಿಲರ್ ಸಂಪರ್ಕಕ್ಕೆ ಅವಕಾಶ ನೀಡಿಲ್ಲ. ಇದು ವಿಯೆನ್ನಾ ಒಪ್ಪಂದದ ಉಲ್ಲಂಘನೆ ಎಂದು ಭಾರತ ವಾದಿಸಿತ್ತು. ಭಾರತದ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡ ನ್ಯಾಯಾಲಯದಲ್ಲಿ ಮೇ 15ರಂದು ವಾದ ಮಂಡಿಸಿತ್ತು.
ಪಾಕಿಸ್ತಾನದ ಪರ ವಾದ ಮಂಡಿಸಿದ್ದ ವಕೀಲರು , ‘ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವೇ ಇರಲಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣ. ರಾಷ್ಟ್ರೀಯ ಭದ್ರತೆ ವಿಚಾರವನ್ನು ಅಂತರರಾಷ್ಟ್ರೀಯ ನ್ಯಾಯಾಲಯ ತೀರ್ಮಾನಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಆದರೆ ಪಾಕ್ ನ ವಾದವನ್ನು ತಿರಸ್ಕರಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯವು ಭಾರತದ ವಾದವನ್ನು ಎತ್ತಿ ಹಿಡಿದಿದೆ. ಅಂತಿಮ ತೀರ್ಪು ಬರುವ ತನಕ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಆದೇಶ ನೀಡಿದೆ.
‘







