ಮೇ 19: ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ, ಹಿರಿಯ ಸಾಹಿತಿ ಸನ್ಮಾನ

ಮಂಗಳೂರು, ಮೇ 18: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಂ ಲೇಖಕರ ಸಂಘವು ನೀಡುವ 2015ನೆ ಸಾಲಿನ ರಾಜ್ಯ ಮಟ್ಟದ ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ ಬಿ. ಎಂ. ಬಶೀರ್ ಅವರ 'ಅಮ್ಮ ಹಚ್ಚಿದ ಒಲೆ’ ಕವನ ಸಂಕಲನವು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಮೇ 19 ಸಂಜೆ 7.20ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
‘ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯದ ಖ್ಯಾತ ಮುಸ್ಲಿಮ್ ಸಾಹಿತಿಗಳಿಗೆ ಸಂಘವು ಕೊಡಮಾಡುವ 2016ನೆ ಸಾಲಿನ ರಾಜ್ಯ ಮಟ್ಟದ ಹಿರಿಯ ಸಾಹಿತಿ ಸನ್ಮಾನಕ್ಕೆ ಆಯ್ಕೆಯಾಗಿರುವ ಕನ್ನಡದ ಶ್ರೇಷ್ಠ ಕಾದಂಬರಿಕಾರ ಬೊಳುವಾರು ಮಹಮ್ಮದ್ ಕುಂಞಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ.
ಸಚಿವ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ನವದೆಹಲಿ ಜೆಎನ್‌ಯುನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ 'ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ಮಾತಾಡಲಿದ್ದಾರೆ.
ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





