ಕರ್ನಾಟಕದ ಮೃತ ಐಎಎಸ್ ಅಧಿಕಾರಿ ಬೃಹತ್ ಹಗರಣವನ್ನು ಬಯಲುಗೊಳಿಸಲಿದ್ದರು: ಉ.ಪ್ರ.ಸಚಿವ

ಲಕ್ನೋ,ಮೇ 18: ಲಕ್ನೋದಲ್ಲಿ ನಿಗೂಢ ಸಾವನ್ನಪ್ಪಿರುವ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ(36) ಅವರು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರದ ಸಾವಿರಾರು ಕೋಟಿ ರೂ.ಗಳ ಬೃಹತ್ ಹಗರಣವನ್ನು ಬಯಲಿಗೆಳೆಯಲು ಸಜ್ಜಾಗಿದ್ದರು ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಸುರೇಶಕುಮಾರ್ ಖನ್ನಾ ಅವರು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಆಯುಕ್ತರಾಗಿದ್ದ ತಿವಾರಿಯವರನ್ನು ಕೊಲೆ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಸದಸ್ಯರ ಆರೋಪಗಳ ನಡುವೆಯೇ ಖನ್ನಾ ಈ ಪ್ರತಿಕ್ರಿಯೆಯನ್ನು ನೀಡಿದರು.
ನಾಲ್ವರು ವೈದ್ಯರ ತಂಡವೊಂದು ತಿವಾರಿಯವರ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆ. ಅವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಹೀಗಾಗಿ ಅವರ ವಿಸೆರಾವನ್ನು ಕಾಯ್ದಿರಿಸಲಾಗಿದೆ ಎಂದು ಅವರು ತಿಳಿಸಿದರು.
ನಿಗೂಢವಾಗಿ ಸಾವನ್ನಪ್ಪಿದ್ದ ತಿವಾರಿಯವರ ಶವ ಲಕ್ನೋದ ಅತ್ಯಂತ ಬಿಗು ಭದ್ರತೆಯ ಹಝರತ್‌ಗಂಜ್ ಪ್ರದೇಶದ ರಸ್ತೆ ಬದಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿತ್ತು. 2007ರ ತಂಡದ ಐಎಎಸ್ ಅಧಿಕಾರಿಯಾಗಿದ್ದ ತಿವಾರಿ ಮಸೂರಿಯಲ್ಲಿ ತರಬೇತಿ ಯೊಂದರಲ್ಲಿ ಪಾಲ್ಗೊಂಡ ಬಳಿಕ ತನ್ನ ಬ್ಯಾಚ್‌ಮೇಟ್ ಜೊತೆ ಹಝರತ್‌ಗಂಜ್‌ನ ಮೀರಾಬಾಯಿ ಅತಿಥಿ ಗೃಹದಲ್ಲಿ ತಂಗಿದ್ದರು. ಬುಧವಾರ ತನ್ನ ಜನ್ಮದಿನದಂದೇ ಶವವಾಗಿ ಪತ್ತೆಯಾದಾಗ ಅವರು ರಾತ್ರಿ ಉಡುಪಿನಲ್ಲಿದ್ದರು.
ಗುರುವಾರ ಸದನವು ಸಮಾವೇಶಗೊಂಡ ತಕ್ಷಣ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕುರಿತಂತೆ ಆಡಳಿತ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಯತ್ನಿಸಿದ್ದವು. ವಿಷಯವನ್ನು ಪ್ರಸ್ತಾಪಿಸಿದ ಎಸ್‌ಪಿ ಸದಸ್ಯ ನಿತಿನ್ ಅಗರವಾಲ್ ಅವರು, ಅತ್ಯಂತ ಬಿಗು ಭದ್ರತೆಯ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯ ಹತ್ಯೆ ನಡೆದಿರುವುದು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸರಕಾರದ ಬಡಾಯಿ ಪೊಳ್ಳು ಎನ್ನುವುದನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.
ವಿಐಪಿ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯ ‘ಕೊಲೆ’ ಗಂಭೀರ ವಿಷಯವಾಗಿದೆ ಎಂದು ಪ್ರತಿಪಕ್ಷ ನಾಯಕ ರಾಮಗೋವಿಂದ ಚೌಧರಿ ಹೇಳಿದರು.
ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಜಯ ಪ್ರತಾಪ್ ಲಲ್ಲು ಆಗ್ರಹಿಸಿದರು.
ಘಟನೆಯ ಕುರಿತು ತನಿಖೆ ಈಗಾಗಲೇ ಆರಂಭಗೊಂಡಿದೆ ಎಂದು ಖನ್ನಾ ಸದನಕ್ಕೆ ಭರವಸೆ ನೀಡಿದರು. ಆದರೆ ಸಚಿವರ ಉತ್ತರದಿಂದ ತೃಪ್ತಗೊಳ್ಳದ ಎಸ್‌ಪಿ, ಕಾಂಗ್ರೆಸ್ ಮತ್ತು ಬಿಎಸ್‌ಪಿ ಸದಸ್ಯರು ಸಭಾತ್ಯಾಗ ನಡೆಸಿದರು.
ತಿವಾರಿಯವರ ಸಾವಿಗೆ ಉಸಿರುಗಟ್ಟುವಿಕೆ ಕಾರಣವಾಗಿರುವಂತೆ ಕಂಡು ಬರುತ್ತಿದೆ. ಸಾವಿಗೆ ನಿಖರವಾದ ಕಾರಣವನ್ನು ತಿಳಿದುಕೊಳ್ಳಲು ಅವರ ವಿಸೆರಾ,ರಕ್ತದ ಮಾದರಿ ಮತ್ತು ಹೃದಯವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಎಸ್‌ಪಿ ದೀಪಕ ಕುಮಾರ್ ತಿಳಿಸಿದರು.
ಕೊಲೆ:ತಂದೆಯ ಆರೋಪ
ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ತಿವಾರಿಯವರ ತಂದೆ ಬಿ.ಎನ್.ತಿವಾರಿ ುವರು ಗುರುವಾರ ಆರೋಪಿಸಿದ್ದಾರೆ.
ತನ್ನ ಊರು ಬಹ್ರೈಚ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘‘ನನ್ನ ಮಗ ತುಂಬ ಪ್ರಾಮಾಣಿಕನಾಗಿದ್ದ. ಭ್ರಷ್ಟ ಅಧಿಕಾರಿಗಳು ಅವನನ್ನು ಇಷ್ಟಪಡುತ್ತಿರಲಿಲ್ಲ. ಅವರೇ ಹೇಗೋ ನನ್ನ ಮಗನ ಕೊಲೆ ಮಾಡಿಸಿದ್ದಾರೆ ’’ಎಂದು ದೂರಿದರು.







