ಕುಲಭೂಷಣ್ ಜಾಧವ್ ಪರ ವಾದ ಮಂಡಿಸಲು ಮಾಜಿ ಅಟಾರ್ನಿ ಜನರಲ್ ಪಡೆದ ಸಂಬಳವೆಷ್ಟು ಗೊತ್ತೇ?

ಹೊಸದಿಲ್ಲಿ, ಮೇ 18: ಕುಲಭೂಷಣ್ ಜಾಧವ್ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ತಡೆಹಿಡಿಯುವಂತೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ನ್ಯಾಯಲಯ ಸೂಚಿಸಿದ್ದು, ಜಾಧವ್ ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಹರೀಶ್ ಸಾಲ್ವೆಯವರ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಸಾಲ್ವೆಯವರು ಈ ವಾದ ಮಂಡಿಸಲು ಪಡೆದುಕೊಂಡ ಸಂಬಳ ಕೇಳಿದರೆ ನೀವಿನ್ನೂ ಆಶ್ಚರ್ಯಚಕಿತರಾಗುತ್ತೀರಿ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವೊಂದರಲ್ಲಿ ವಾದ ಮಂಡಿಸಲು ಸಾಲ್ವೆಯವರು ಪಡೆದುಕೊಂಡ ಮೊತ್ತ ಕೇವಲ 1 ರೂ.
ಈ ಹಿಂದೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹರೀಶ್ ಸಾಲ್ವೆಯವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ನಡೆಸಿದ ಮಾತುಕತೆಯಲ್ಲಿ ಪ್ರಧಾನಿ ಸಾಲ್ವೆಯವರಿಗೆ ಕೃತಜ್ಞತೆ ತಿಳಿಸಿದ್ದಾಗಿ ತಿಳಿದುಬಂದಿದೆ.
ಸುಷ್ಮಾ ಅವರೂ ಸಾಲ್ವೆಯವರ ಪ್ರಯತ್ನವನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟೊಂದನ್ನು ಪೋಸ್ಟ್ ಮಾಡಿರುವ ಅವರು, “ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಭಾರತದ ಪ್ರಕರಣವನ್ನು ಅತ್ಯಂತ ಮಂಡಿಸಿದ ಹರೀಶ್ ಸಾಲ್ವೆಯವರಿಗೆ ನಾವು ಕೃತಜ್ಞರಾಗಿದ್ದೇವೆ” ಎಂದಿದ್ದಾರೆ







