ಬಿಜೆಪಿ ಸಂಸದ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ; ದಾಖಲೆ ಪರಿಶೀಲನೆ

ಚಿತ್ರದುರ್ಗ, ಮೇ 18: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ಅವರ ಮನೆ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆ ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಗುರುವಾರ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ತಾಲೂಕು, ದಾವಣಗೆರೆ ಸೇರಿ ಮತ್ತಿತರ ಕಡೆ 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಅಡಿಕೆ ವ್ಯಾಪಾರಿಗಳಾಗಿರುವ ಸಿದ್ದೇಶ್ವರ್ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಯ ಮಾಲಕತ್ವವನ್ನು ಹೊಂದಿದ್ದಾರೆ. ಇಲ್ಲಿನ ಅವರ ನಿವಾಸ, ಜಿ.ಎಂ.ಸಿದ್ದೇಶ್ವರ್ ಒಡೆತನದ ಗುಟ್ಕಾ ಫ್ಯಾಕ್ಟರಿ, ಜಿಎಂ ಸೌಹಾರ್ದ ಸಹಕಾರ ಪತ್ತಿನ ಬ್ಯಾಂಕ್, ಜಿಎಂಐಟಿ ಕಾಲೇಜು, ಅಡಿಕೆ ಮಂಡಿ, ಕಚೇರಿ ಸೇರಿ ಮತ್ತಿತರ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಭೀಮಸಮುದ್ರದಲ್ಲಿರುವ ಸಿದ್ದೇಶ್ವರ್ ಅವರ ಸಹೋದರ ಪ್ರಸನ್ನಕುಮಾರ್ ನಿವಾಸ ಹಾಗೂ ಅವರ ಒಡೆತನದ ಕಾರ್ಖಾನೆಯೊಂದರ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಬ್ಯಾಂಕ್ ವಹಿವಾಟು, ಖರೀದಿಸಿರುವ ಆಸ್ತಿ, ಮನೆ, ಜಮೀನು ಇತ್ಯಾದಿ ವಿವರಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿದ್ದೇಶ್ವರ್ ತುಮಕೂರಿನ ಪ್ರವಾಸದಲ್ಲಿದ್ದರು ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಮಾಜಿ ಸಚಿವರಾದ ಲಾಲೂ ಪ್ರಸಾದ್ ಯಾದವ್, ಪಿ.ಚಿದಂಬರಂ ಅವರ ಪುತ್ರನ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ, ಬಿಜೆಪಿ ಸಂಸದರೊಬ್ಬರ ಮೇಲೆ ನಡೆದಿರುವ ದಾಳಿ ಇದೇ ಮೊದಲು.







