ಶಾಸಕ ಎಸ್.ಟಿ.ಸೋಮಶೇಖರ್‌ರಿಂದ ಅನುದಾನ ದುರ್ಬಳಕೆ: ಬಿಜೆಪಿ ಆರೋಪ
ಬೆಂಗಳೂರು, ಮೇ 18: ತ್ಯಾಜ್ಯ ಸಂಸ್ಕರಣಾ ಘಟಕ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ನೀಡುವ ಅನುದಾನವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿನಿತ್ಯ ಉತ್ಪಾದನೆ ಆಗುವ 4 ಸಾವಿರ ಟನ್ ತ್ಯಾಜ್ಯವನ್ನು 9 ಸಂಸ್ಕರಣಾ ಘಟಕಗಳಿಗೆ ಮತ್ತು 3 ಕಡೆಗಳಲ್ಲಿ ಭೂಭರ್ತಿ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ. ಈ ಘಟಕಗಳ ವ್ಯಾಪ್ತಿಯಲ್ಲಿನ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದರು.
ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಕನ್ನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನಹಳ್ಳಿ, ಲಿಂಗಧೀರನಹಳ್ಳಿ ವ್ಯಾಪ್ತಿಯ ಪ್ರದೇಶದ ಅಭಿವೃದ್ಧಿಗೆ 98 ಕೋಟಿ ರೂ.ಅನುದಾನ ಮಂಜೂರಾಗಿದೆ. ಆ ಪೈಕಿ ಶೇ.10ರಷ್ಟು ಪ್ರದೇಶಕ್ಕೆ ಖರ್ಚು ಮಾಡಿದ್ದು, ಉಳಿದ ಹಣವನ್ನು ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸಂಸ್ಕರಣಾ ಘಟಕದ ಸುತ್ತಮುತ್ತ ಕಸದ ಲಾರಿಗಳ ಸಂಚಾರಕ್ಕೆ ರಸ್ತೆಗಳು ದುರಸ್ಥಿ ಮಾಡಬೇಕಾಗುತ್ತದೆ. ಆದರೆ, ಈ ಪ್ರದೇಶದ ಅಭಿವೃದ್ಧಿಗೆ ಬಂದ ಹಣವನ್ನು ತಾವರೆಕೆರೆ, ರಾಮೋಹಳ್ಳಿ, ಕೆರೆ ಚೂಡನಹಳ್ಳಿ, ಕಗ್ಗಲೀಪುರ ಪ್ರದೇಶದ ರಸ್ತೆ ಸೇರಿ ಇತರೆ ಕಾಮಗಾರಿಗೆ ಬಳಕೆ ಮಾಡಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದರು.
ಶಾಸಕ ಸೋಮಶೇಖರ್ ಖಾಸಗಿಯಾಗಿ ನಿರ್ಮಿಸುತ್ತಿರುವ ಬಡಾವಣೆ ನಿವೇಶನಕ್ಕೆ ಹೆಚ್ಚಿನ ಬೆಲೆ ಬರಲೆಂದು ತ್ಯಾಜ್ಯ ಸಂಸ್ಕರಣಾ ಘಟಕಗಳ ವ್ಯಾಪ್ತಿಯ ಅನುದಾನವನ್ನು ಬೇರೆ ಪ್ರದೇಶದ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.
ಈ ಅನುದಾನ ದುರ್ಬಳಕೆ ಸಂಬಂಧ ಶಾಸಕ ಸೋಮಶೇಖರ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಅಥವಾ ಸಿಬಿಐ ತನಿಖೆಗೂ ಒಪ್ಪಿಸಬೇಕು ಎಂದ ರಮೇಶ್, ಈ ಸಂಬಂಧ ಶೀಘ್ರದಲ್ಲೆ ರಾಜ್ಯಪಾಲರು ಮತ್ತು ಬಿಎಂಟಿಎಫ್‌ನಲ್ಲಿ ಮೊಕದ್ದಮೆ ದಾಖಲಿಸಿರುವೆ ಎಂದರು.







