ಮಾನವನ ನಡತೆಯಿಂದ ಆತನ ವ್ಯಕ್ತಿತ್ವ ನಿರ್ಮಾಣ: ಕೇಂದ್ರ ಸಚಿವ ಮೇಘ್ವಾಲ್
ವಿದ್ಯಾವರ್ಧಕ ಸಂಘದ ಆದರ್ಶ ಗ್ರಾಮ ಯೋಜನೆಗೆ ಚಾಲನೆ

ಪುತ್ತೂರು, ಮೇ 18: ಬರಿಯ ಉಡುಗೆ ತೊಡುಗೆಗಳು ಮಾನವನ ವ್ಯಕ್ತಿತ್ವವನ್ನು ನಿರ್ಮಿಸುವುದಲ್ಲ , ಬದಲಾಗಿ ಆತನ ನಡತೆಯೇ ಅದನ್ನು ನಿರ್ಮಿಸುತ್ತದೆ. ಸಮಾಜದಿಂದ ಪಡೆದುದಕ್ಕೆ ಪ್ರತಿಯಾಗಿ ನಾವು ಏನನ್ನಾದರು ನೀಡಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಯುವಜನತೆ ಭಾರತವನ್ನು ವಿಶ್ವವಂದ್ಯವನ್ನಾಗಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಎಂದು ಕೇಂದ್ರ ಸರ್ಕಾರದ ಹಣಕಾಸು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದರು.
ಅವರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕುಳ ಗ್ರಾಮದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆದರ್ಶ ಗ್ರಾಮ ಯೋಜನೆಯಡಿಯಲ್ಲಿನ ‘ಕುಳ ಗ್ರಾಮದ ಅಭಿವೃದ್ಧಿ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ್ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ.ಕೆ.ಎಮ್.ಕೃಷ್ಣ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ.ಜಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಎಮ್.ಎಸ್.ಗೋವಿಂದೇಗೌಡ ವಂದಿಸಿದರು. ಉಪನ್ಯಾಸಕಿಯರಾದ ಪ್ರೊ.ಸಂಗೀತಾ.ಬಿ.ಎಲ್ ಮತ್ತು ಪ್ರೊ.ನಂದಿನಿ.ಜಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು.







