ಒಂದೂವರೆ ವರ್ಷ ಹಿಂದಿನ ಕಳವು: ಸೊತ್ತು ಪತ್ತೆ
ಕಾಪು, ಮೇ 18: ತನ್ನ ಸಿಬ್ಬಂದಿ ಗಳೊಂದಿಗೆ ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಕರ್ತವ್ಯ ನಿರತರಾಗಿದ್ದ ಕಾಪು ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕ ಲಕ್ಷ್ಮಣ ಬಿ. ಅವರು ಮೂಳೂರು ಕಾರ್ಪೋರೇಷನ್ ಬ್ಯಾಂಕ್ ಬಳಿ ಸಂಶಯಾಸ್ಪದ ರೀತಿಯ ನಡವಳಿಕೆ ತೋರಿದ ವ್ಯಕ್ತಿಯೊಬ್ಬನನ್ನು ಹಿಡಿದು ವಿಚಾರಿಸಿದಾಗ ಆತ ಒಂದೂವರೆ ವರ್ಷದ ಹಿಂದೆ ಕಟಪಾಡಿ ಕೋಟೆ ಗ್ರಾಮದ ಮನೆಯೊಂದರಲ್ಲಿ ನಡೆಸಿದ ಕಳ್ಳತನವೊಂದು ಬಹಿರಂಗಗೊಳ್ಳುವಂತಾಯಿತು.
ಕೋಟೆ ಗ್ರಾಮದ ಖಂಡಿಗೆಯ ವಾಮನ ಪೂಜಾರಿ (35) ಪೊಲೀಸರ ವಶದಲ್ಲಿರುವ ಆರೋಪಿ ಎಂದು ಗುರುತಿಸಲಾಗಿದೆ. ಆತನ ಪ್ಯಾಂಟ್ ಜೇಬನ್ನು ಪರಿಶೀಲಿಸಿದಾಗ ಅಲ್ಲಿ ಒಂದು ಕಟ್ಟು ಸಿಕ್ಕಿದ್ದು, ಅದರಲ್ಲಿ ಚಿನ್ನಾಭರಣ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಇನ್ನಷ್ಟು ವಿಚಾರಿಸಿದಾಗ ಕೋಟೆ ಗ್ರಾಮದ ಗೀತಾ ಎಂಬವರ ಮನೆಯಿಂದ ಇವುಗಳನ್ನು ಒಂದೂವರೆ ವರ್ಷದ ಹಿಂದೆ ಕದ್ದಿದ್ದಾಗಿ ಬಾಯಿ ಬಿಟ್ಟನು ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಿನ್ನವನ್ನು ತಾನು ಕಟಪಾಡಿಯ ಸಿಎ ಬ್ಯಾಂಕ್ ಹಾಗೂ ಮಟ್ಟುವಿನ ಸಿ.ಎ.ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದು, ಈಗ ಅದನ್ನು ಬಿಡಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದು, ಇವುಗಳ ಅಂದಾಜು ಮೊತ್ತ 3,54,206 ರೂ.ಗಳೆಂದು ಹೇಳಲಾಗಿದೆ. ಚಿನ್ನವನ್ನು ಸ್ವಾಧೀನ ಪಡಿಸಿಕೊಂಡಿರುವ ಪೊಲೀಸರು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ ಗ್ರಾಮದ ಖಂಡಿಗೆಯವರಾಗಿದ್ದು, ಮುಂಬೈ ಯಲ್ಲಿ ವಾಸವಾಗಿರುವ ರಾಮ ಪೂಜಾರಿ ಎಂಬವರ ಪತ್ನಿ ಗೀತಾ ಇದೀಗ ತನ್ನ ಕೋಟೆ ಗ್ರಾಮದ ಮನೆಯಲ್ಲಿ ಒಂದೂವರೆ ವರ್ಷದ ಹಿಂದೆ ಚಿನ್ನಾಭರಣ ಕಳವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ತಾವು ಊರಿನ ಮನೆಯ ಕಪಾಟಿನಲ್ಲಿಟ್ಟಿದ್ದ 113 ಗ್ರಾಂ ತೂಕದ 3.50 ಲಕ್ಷ ರೂ.ವೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೇಸು ದಾಖಲಿಸಿದರೆ ಈ ಸಂಬಂಧ ಆಗಾಗ ಮುಂಬಯಿಯಿಂದ ಊರಿಗೆ ಬರಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಅಂದು ಕಳ್ಳತನದ ದೂರು ದಾಖಲಿಸಿರಲಿಲ್ಲ ಎಂದು ಗೀತಾ ಹೇಳಿದ್ದಾರೆ. ಇದೀಗ ವಾಮನನ ಬಳಿ ಪತ್ತೆಯಾದ ಚಿನ್ನಾಭರಣಗಳು ತನ್ನ ಮನೆಯಿಂದ ಕಳ್ಳತನವಾದವುಗಳೆಂದು ಗೀತಾ ಗುರುತಿಸಿರುವುದಾಗಿ ಕಾಪು ಪೊಲೀಸರು ತಿಳಿಸಿದ್ದಾರೆ.







