ಫೈನಲ್‌ಗೇರಲು ಮುಂಬೈ -ಕೋಲ್ಕತಾ ಹಣಾಹಣಿ
ಇಂದು ಉದ್ಯಾನಗರಿಯಲ್ಲಿ ಕ್ವಾಲಿಫೈಯರ್ -2, ಸೋತ ತಂಡ ಕೂಟದಿಂದ ಹೊರಕ್ಕೆ

ಬೆಂಗಳೂರು, ಮೇ 18: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ- 20 ಟೂರ್ನಿಯ ಕ್ವಾಲಿಫೈಯರ್ -2ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡ ಫೈನಲ್‌ಗೇರಲು ಹಣಾಹಣಿ ನಡೆಸಲಿದೆ.
ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫೈಯರ್-1ರಲ್ಲಿ ರೈಸಿಂಗ್ ಪುಣೆ ವಾರಿಯರ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿ ಫೈನಲ್‌ಗೇರಲು ಎಲಿಮಿನೇಟರ್‌ನಲ್ಲಿ ಜಯಿಸಿದ ತಂಡವನ್ನು ಮಣಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಈ ಪಂದ್ಯದಲ್ಲಿ ಜಯಿಸಿದ ತಂಡ ಮೇ 21ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ರೈಸಿಂಗ್ ಪುಣೆ ವಾರಿಯರ್ಸ್ ವಿರುದ್ಧ ಹೋರಾಟ ನಡೆಸುವ ಅವಕಾಶ ಪಡೆಯಲಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿ ಅದೇ ಕ್ರೀಡಾಂಗಣದಲ್ಲಿ ಇನ್ನೊಂದು ಪಂದ್ಯವನ್ನು ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.
ಕೋಲ್ಕತಾ ನೈಟ್ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತ್ತು. ಸ್ಪಿನ್ನರ್ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್‌ನ ಬೌಲರ್ ನಥನ್ ಕೌಲ್ಟರ್ ನೀಲ್ 20ಕ್ಕೆ 3 ವಿಕೆಟ್ ಉಡಾಯಿಸುವ ಮೂಲಕ ಯಶಸ್ಸು ಗಳಿಸಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಉಮೇಶ್ ಯಾದವ್, ಸುನೀಲ್ ನರೇನ್ ಮತ್ತು ಪಿಯೂಷ್ ಚಾವ್ಲಾ ತಮ್ಮ ಕೈಚಳಕ ಪ್ರದರ್ಶಿಸಿದ್ದರು. ಕೋಲ್ಕತಾ ಸ್ಕೋರ್ ಬೋರ್ಡ್‌ನಲ್ಲಿ 12 ರನ್ ದಾಖಲಾಗುವಷ್ಟರಲ್ಲಿ ಅಗ್ರ ಸರದಿಯ ಮೂವರು ದಾಂಡಿಗರನ್ನು ಕಳೆದುಕೊಂಡಿತ್ತು. ಮನೀಷ್ ಪಾಂಡೆ ಗಾಯದ ಕಾರಣದಿಂದಾಗಿ ಈ ಪಂದ್ಯದಲ್ಲಿ ಆಡಿರಲಿಲ್ಲ.ಅವರ ಅನುಪಸ್ಥಿತಿಯಲ್ಲಿ ನಾಯಕ ಗೌತಮ್ ಗಂಭೀರ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಮುಂಬೈ ತಂಡ ಕ್ವಾಲಿಫೈಯರ್ -1ರಲ್ಲಿ 17ರ ಹರೆಯದ ಯುವ ಬೌಲರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೆದರಿ ಹೋರಾಟದ ಹಾದಿಯಲ್ಲಿ ಮುಗ್ಗರಿಸಿತ್ತು.ನಾಯಕ ರೋಹಿತ್ ಶರ್ಮ, ಅಂಬಟಿ ರಾಯುಡು ಮತ್ತು ಕೀರನ್ ಪೊಲಾರ್ಡ್ ಅವರು ಸುಂದರ್ ದಾಳಿಯನ್ನು ಎದುರಿಸಲಾರದೆ ಕೈಸುಟ್ಟುಕೊಂಡಿದ್ದರು.
ಮುಂಬೈ ಮತ್ತು ಕೋಲ್ಕತಾದಿಂದ ಈ ಪಂದ್ಯದಲ್ಲಿ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ. ಆದರೆ ಉಭಯ ತಂಡಗಳು ಮೊದಲ ಬಾರಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಣಾಹಣಿ ನಡೆಸುತ್ತಿದೆ.
ಹೆಡ್-ಟು-ಹೆಡ್
ಆಡಿದ ಪಂದ್ಯಗಳು : 20
ಗೆಲುವು : ಮುಂಬೈ 15, ಕೋಲ್ಕತಾ 5. ,,,,,,,,,,,







