ಆನೆ ಗಣತಿ ಆರಂಭ: ಕಾಫಿ ತೋಟಗಳೇ ಕಾಡಾನೆಗಳ ನೆಲೆಬೀಡು

ಮಡಿಕೇರಿ, ಮೇ 18: ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳ ಗಣತಿ ಕಾರ್ಯ ಆರಂಭವಾಗಿದೆ. ವೀರಾಜಪೇಟೆ ವಿಭಾಗದ ಕಾಫಿ ತೋಟ ಗಳಲ್ಲಿ ಸುಮಾರು 69 ಕಾಡಾನೆಗಳು ನೆಲೆಸಿರುವ ಬಗ್ಗೆ ಗಣತಿ ಮೂಲಕ ಮಾಹಿತಿ ಲಭ್ಯವಾಗಿದೆ ಎಂದು ಅರಣ್ಯ ಉಪವಲಯಾಧಿಕಾರಿ ಕೆ.ಎಂ. ದೇವಯ್ಯ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಹಾಗೂ ಗಣತಿ ಸಿಬ್ಬಂದಿ ಕಾಫಿ ತೋಟ ಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಗಣತಿ ಮಾಡುತ್ತಿದ್ದಾರೆ. ಅಮ್ಮತ್ತಿ ಹೋಬಳಿಯಲ್ಲಿರುವ ಟಾಟಾ ಹಾಗೂ ಬಿಬಿಟಿಸಿ ಕಂಪೆನಿಗಳ ತೋಟಗಳಲ್ಲಿ ಬೀಡುಬಿಟ್ಟಿರುವ 49 ಕಾಡಾನೆಗಳು ಪತ್ತೆಯಾಗಿವೆ. ವೀರಾಜಪೇಟೆ ಸಮೀಪದ ಚೆಯ್ಯಂಡಾಣೆ ಚೇಲಾವರ ವ್ಯಾಪ್ತಿಯಲ್ಲಿ 8 ಮತ್ತು ಹೆಗ್ಗೆಳದಲ್ಲಿ 12 ಕಾಡಾನೆಗಳು ಇರುವುದಾಗಿ ಗಣತಿಯಿಂದ ತಿಳಿದು ಬಂದಿದೆ. ಅಲ್ಲದೆ, ಸಿದ್ದಾಪುರ ವ್ಯಾಪ್ತಿಯಲ್ಲಿಯೂ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ತಿಳಿಸಿದರು.
ವೀರಾಜಪೇಟೆ ವಲಯ ಅರಣ್ಯಧಿಕಾರಿ ಗೋಪಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ, ಅರಣ್ಯ ಸಿಬ್ಬಂದಿಯಾದ ಜತ್ತಪ್ಪ,ಸುಬ್ರಯ್ಯ ಅಕ್ಕಮ್ಮ ಇನ್ನಿತರರು ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಹೃದಯಾಘಾತ: ವ್ಯಕ್ತಿ ಸಾವು
ಚಿತ್ರದುರ್ಗ, ಮೇ 18: ಪುತ್ರಿಯ ವಿವಾಹದಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಇಲ್ಲಿನ ನಿವಾಸಿಯೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಗರದ ಸ್ಟೇಡಿಯಂ ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಆರ್. ಜಯಣ್ಣ ಹೃದಯಾಘಾತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬುಧವಾರ ಎರಡು ಬಸ್‌ಗಳಲ್ಲಿ ಬಂಧು-ಬಳಗದೊಂದಿಗೆ ಧಾರವಾಡಕ್ಕೆ ತೆರಳಿ ಮಂಜುನಾಥ್ ಎಂಬವರಿಗೆ ಪುತ್ರಿಯನ್ನು ಧಾರೆ ಎರೆದು, ರಾತ್ರಿ ಎಂಟು ಗಂಟೆಗೆ ಚಿತ್ರದುರ್ಗಕ್ಕೆ ವಾಪಸಾಗಿದ್ದರು. ಊಟ ಮುಗಿಸಿ ಮಲಗಿದ ಮಂಜುನಾಥ್ ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.







