ಜಿಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ವೀಕ್ಷಕ ವಿಷ್ಣುನಾಥ್ ಸಮಾಲೋಚನೆ

ಉಡುಪಿ, ಮೇ 18: ಎಐಸಿಸಿ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಎಐಸಿಸಿ ವೀಕ್ಷಕರಾದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಸಿ. ವಿಷ್ಣನಾಥ್ ಅವರು ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಷ್ಣುನಾಥ್, ಉಡುಪಿಯೂ ಸೇರಿದಂತೆ ಈಗಾಗಲೇ 6 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಪದಾಧಿಕಾರಿಗಳೊಂದಿಗೆ ಪಕ್ಷದ ಬಲವರ್ಧನೆ ಕುರಿತಂತೆ ಚರ್ಚಿಸಿದ್ದೇನೆ. ಮುಂದಿನ ಭೇಟಿಯ ವೇಳೆ ಜಿಲ್ಲಾ ಸಮಿತಿಗಳಲ್ಲಿ ಬದಲಾವಣೆ ಕುರಿತು ನಿರ್ಧರಿಸಲಾಗುವುದು ಎಂದರು.
ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆಯನ್ನು ಪಕ್ಷ ಆರಂಭಿಸಿದ್ದು, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ 165 ಭರವಸೆಗಳಲ್ಲಿ ಈವರೆಗೆ 150ಕ್ಕೂ ಅಧಿಕ ಭರವಸೆಗಳನ್ನು ಈಡೇರಿಸಲಾಗಿದೆ. ಇವುಗಳನ್ನು ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಬೇಕಾಗಿದೆ ಎಂದವರು ನುಡಿದರು.
ರಾಜ್ಯದ ನಾಲ್ಕು ವಿಭಾಗಗಳಿಗೆ ಎಐಸಿಸಿ ನಾಲ್ವರು ವೀಕ್ಷಕರನ್ನು ನೇಮಿಸಿದ್ದು, ಎಲ್ಲರೂ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡುತಿದ್ದೇವೆ. ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ತಾನು ಇಂದು ಉಸ್ತುವಾರಿ ಸಚಿವರು, ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ್ದು, ಅವರ ಅಭಿಪ್ರಾಯವನ್ನು ಆಲಿಸಿದ್ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕರಾದ ಎಂ.ಎ.ಗಫೂರ್, ಗೋಪಾಲ ಭಂಡಾರಿ, ವರೋನಿಕಾ ಕರ್ನೇಲಿಯೊ, ಹರೀಶ್ ಕಿಣಿ, ಅಶೋಕ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು.







