ಗಾಂಜಾ ಸೇದಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಹಲ್ಲೆ: ಸಿಎಫ್‌ಐ ಖಂಡನೆ
ಬಂಟ್ವಾಳ, ಮೇ 19: ಗಾಂಜಾ ಸೇದಲು ಒತ್ತಾಯಿಸಿದಾಗ ಅದನ್ನು ನಿರಾಕರಿಸಿದ ಇಬ್ಬರು ದಲಿತ ಶಾಲಾ ಬಾಲಕರಿಗೆ ಹಲ್ಲೆ ನಡೆಸಿರುವ ಘಟನೆಯನ್ನು ಕ್ಯಾಂಪಸ್ ಫ್ರಂಟ್ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.
ಬಂಟ್ವಾಳ ತಾಲೂಕಿನ ಕುಮುಡೇಲು ಎಂಬಲ್ಲಿನ ಶಾಲಾ ಮೈದಾನಲ್ಲಿ ಆಟವಾಡುತ್ತಿದ್ದ ಸಮಂತ್ ಮತ್ತು ಸುಶಾಂತ್ ಎಂಬ ಇಬ್ಬರು ದಲಿತ ವಿದ್ಯಾರ್ಥಿಗಳಿಗೆ ಗಾಂಜಾ ಸೇದುವಂತೆ ಐವರು ಯುವಕರ ತಂಡವೊಂದು ಒತ್ತಾಯಿಸಿದಲ್ಲದೆ ಗಾಂಜ ಸೇದಲು ನಿರಾಕರಿಸಿದ ಆ ಬಾಲಕರಿಗೆ ಹಲ್ಲೆ ನಡೆಸಿರುವುದು ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಶಾಲಾ ಆವರಣದಲ್ಲೇ ಇಂತಹ ನೀಚ ಘಟನೆ ನಡೆದಿರುವುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರವು ಜರಗಿಸಬೇಕು ಎಂದು ಒತ್ತಾಯಿಸಿದೆ.
ಪ್ರಸ್ತುತ ಸಮಾಜದಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಒಳಗಾಗು ತ್ತಿದ್ದಾರೆ. ಗಾಂಜಾ ಸಹಿತ ಮಾದಕ ದ್ರವ್ಯಗಳ ಮೂಲವನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು ಎಂದು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿರುವ ಕ್ಯಾಂಪಸ್ ಫ್ರಂಟ್, ಕ್ಯಾಂಪಸ್‌ಗಳಲ್ಲಿ ಗಾಂಜಾ ಮಾರಾಟ ಮಾಡುವವರ ಮೇಲೂ ಪೊಲೀಸ್ ಇಲಾಖೆ ನಿಗಾ ಇಡಬೇಕು ಎಂದು ಒತ್ತಾಯಿಸಿದೆ.





