ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರ ಸೇವಕರು: ಡಾ ಎಂ.ಆರ್. ರವಿ

ಮಡಿಕೇರಿ ಮೇ ಮೇ 19 : ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರ ಸೇವಕರೇ ಹೊರತು ಮಾಲಕರಲ್ಲವೆಂದು ಅಭಿಪ್ರಾಯಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎಂ.ಆರ್. ರವಿ, ಸಾರ್ವಜನಿಕರ ಹಿತಾಸಕ್ತಿ ಕಾಯುವುದು ಪ್ರತಿಯೊಬ್ಬರ ಗುರಿಯಾಗಬೇಕು ಎಂದರು.
ಕೊಡಗು ಪತ್ರಕರ್ತರ ವೇದಿಕೆ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಗರ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ವಿಚಾರ ಸಂಕಿರಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಷಯದ ಕುರಿತು ಅವರು ಮಾತನಾಡಿದರು.
ಪಂಚಾಯತ್ ರಾಜ್ಯ ವ್ಯವಸ್ಥೆ ಎನ್ನುವುದು ಮೂಲತಃ ಅಭಿವೃದ್ಧಿಯ ಇಲಾಖೆಯೇ ಆಗಿದ್ದು, ಇಲ್ಲಿ ಚರ್ಚೆ, ಚಿಂತನ-ಮಂಥನಗಳ ಬಳಿಕವಷ್ಟೆ ಅಮೃತ ದೊರಕಲು ಸಾಧ್ಯ. ಪಂಚಾಯತ್ ವ್ಯವಸ್ಥಗೆ 28 ವಿವಿಧ ಇಲಾಖೆಗಳು ಒಳಪಡುವುದರಿಂದ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯ ಸಮಾಜದ ಅಭಿವೃದ್ಧಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಡಾ.ರವಿ ಹೇಳಿದರು.
ಪಂಚಾಯತ್ ವ್ಯವಸ್ಥೆಯಲ್ಲಿ ಒಂದು ವಿಚಾರದ ಕುರಿತು ವ್ಯಾಪಕ ಚರ್ಚೆಗಳ ಉದ್ದೇಶ ಬೆಳಕು ನೀಡುವುದಕ್ಕೆ ಮಾತ್ರ ಬಳಕೆಯಾಗಲಿ ಬಿಸಿಯನ್ನು ಉಂಟುಮಾಡುವುದಕ್ಕಲ್ಲವೆಂದು ತಿಳಿಸಿದ ಡಾ ಎಂ.ಆರ್. ರವಿ, ಸಹಕಾರ ಮತ್ತು ಸಮನ್ವಯದಿಂದ ಮಾತ್ರ ಸುಗಮ ಆಡಳಿತವನ್ನು ನೀಡಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರಾದ ಜೆ.ಎ. ಕರುಂಬಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸಿಇಒ ಚಾರುಲತಾ ಸೋಮಲ್, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮನು ಶೆಣೈ, ಹಿರಿಯ ಪತ್ರಕರ್ತರಾದ ಜಿ. ಚಿದ್ವಿಲಾಸ್, ಪ್ರೆಸ್ ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಟ್ಟಂಗಡ ರವಿ ಸುಬ್ಬಯ್ಯ ಉಪಸ್ಥಿತರಿದ್ದರು.
ಲಕ್ನೋದಲ್ಲಿ ಅಕಾಲಿಕ ಮರಣಕ್ಕೀಡಾದ ಅನುರಾಗ್ ತಿವಾರಿ ಹಾಗೂ ಕೇಂದ್ರ ಸಚಿವ ಅನಿಲ್ ದವೆ ಅವರ ನಿಧನಕ್ಕೆ ಮೌನಾಚರಣೆಯ ಮೂಲಕ ಸಭೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು.
ನಾಡಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಪದಾಧಿಕಾರಿಗಳಾದ ಅಬ್ದುಲ್ ರಹ್ಮಾನ್ ಮತ್ತು ಟಿ.ಕೆ. ತಿಮ್ಮಪ್ಪ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮಧೋಷ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು.







