ಆಮಿರ್-ಬಿಗ್ಬಿ ಚಿತ್ರಕ್ಕೆ ಕತ್ರೀನಾ ನಾಯಕಿ

ಭಾರೀ ಯಶಸ್ಸು ಕಂಡ ಧಂಗಲ್ ಚಿತ್ರದ ಬಳಿಕ ಆಮಿರ್ಖಾನ್ ಅಭಿನಯಿಸಲಿರುವ ‘ಥಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರದ ನಾಯಕಿ ಪಾತ್ರ ಕತ್ರೀನಾ ಕೈಫ್ಗೆ ಒಲಿದಿದೆ. ಧೂಮ್ 3 ಖ್ಯಾತಿಯ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್ ಕೂಡಾ ಮುಖ್ಯಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಕತ್ರೀನಾ ಹಾಗೂ ಆಮಿರ್ಖಾನ್ ಜೊತೆಯಾಗಿ ಅಭಿನಯಿಸುತ್ತಿರುವ ಎರಡನೆ ಚಿತ್ರ ಇದಾಗಿದೆ.
2013ರಲ್ಲಿ ತೆರೆಕಂಡ ಧೂಮ್3 ಚಿತ್ರದಲ್ಲಿ ಈ ತಾರಾಜೋಡಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿತ್ತು. ಯಶ್ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಧಂಗಲ್ ಖ್ಯಾತಿಯ ಫಾತಿಮಾ ಸಾನಾ ಶೇಖ್ ಕೂಡಾ ನಟಿಸಲಿದ್ದಾರೆ. ಎಲ್ಲವೂ ಸರಿಹೋದಲ್ಲಿ ಥಗ್ಸ್ ಆಫ್ ಹಿಂದೂಸ್ಥಾನ್ ಜೂನ್ನಲ್ಲಿ ಸೆಟ್ಟೇರಲಿದೆ. ಧಂಗಲ್ನಲ್ಲಿ ಕುಸ್ತಿಪಟು ಗೀತಾ ಪೋಗಟ್ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದ ಫಾತಿಮಾ ಶೇಖ್ಗೆ ಈ ಚಿತ್ರ ಹೊಸ ಬ್ರೇಕ್ ನೀಡುವ ನಿರೀಕ್ಷೆಯಿದೆ.
ಸ್ವಾತಂತ್ರಪೂರ್ವದಲ್ಲಿ ಭಾರತದಲ್ಲಿ ಭಯದ ವಾತಾವರಣವನ್ನು ಮೂಡಿಸಿದ್ದ ಠಕ್ಕರೆಂಬ ದರೋಡೆಕೋರರ ತಂಡದ ಕುರಿತಾದ ಕಥಾವಸ್ತುವನ್ನು ಈ ಚಿತ್ರವನ್ನು ಒಳಗೊಂಡಿದೆ.
ಸದ್ಯಕ್ಕೆ ಕತ್ರೀನಾಕೈಫ್, ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಥಗ್ಸ್ ಆಫ್ ಹಿಂದೂಸ್ಥಾನ್ ಮುಂದಿನ ವರ್ಷದ ದೀಪಾವಳಿ ವೇಳೆಗೆ ಬಿಡುಗಡೆಗೊಳ್ಳಲಿದೆಯೆಂದು ಚಿತ್ರತಂಡದ ಅಂಬೋಣ.