ಸಂಗೀತ ಆಸ್ವಾದನೆಯಿಂದ ಮಾನಸಿಕ ಆರೋಗ್ಯ ವೃದ್ಧಿ-ಡಾ ಶ್ರೀಪತಿ ರಾವ್

ಪುತ್ತೂರು, ಮೇ 19: ಸಂಗೀತ ಕಾರ್ಯಕ್ರಮಗಳನ್ನು ನೋಡುವುದು ಮತ್ತು ಅದನ್ನು ಆಸ್ವಾದಿಸುವುದರಿಂದ ಮನಸ್ಸಿಗೆ ನೆಮ್ಮದಿ ಕೊಡುವುದರ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ ಎಂದು ಪುತ್ತೂರು ಪ್ರಗತಿ ಆಸ್ಪತ್ರೆಯ ವೈದ್ಯಕೀಯ ಮತ್ತು ಹೃದ್ರೋಗ ತಜ್ಞ ಡಾ ಶ್ರೀಪತಿ ರಾವ್ ಹೇಳಿದರು.
ಅವರು ಗುರುವಾರ ಪುತ್ತೂರಿನ ಕೊಂಬೆಟ್ಟು ಸಾಧನಾ ಸಂಗೀತ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಮೇ. 18, 19, 20ರಂದು 3 ದಿನಗಳ ಕಾಲ ನಡೆಯಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ ಗಣೇಶಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಪ್ರತಿಯೋರ್ವ ವ್ಯಕ್ತಿಯಲ್ಲೂ ವಿಶೇಷವಾದ ಪ್ರಭಾವವನ್ನು ಬೀರುತ್ತದೆ, ಅದರಲ್ಲಿನ ತನ್ಮತೆಯತೆ, ಆನಂದ ಮನುಷ್ಯನನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ, ಆ ಮೂಲಕ ಅದು ಮನಸ್ಸಿಗೆ ಇಂಪು ಕೊಡುತ್ತದೆ, ಮಾನಸಿಕ ಆರೋಗ್ಯವನ್ನು ಹಿಡಿತದಲ್ಲಿ ಹಿಡಿದುಕೊಳ್ಳುತ್ತದೆ ಎಂದ ಅವರು ಸಾಧನಾ ಸಂಗೀತ ಶಾಲೆ ಯುವ ಪ್ರತಿಭೆಗಳನ್ನು ಹೊರ ತರುವಲ್ಲಿ ಮಾಡುವ ಸಾಧನೆ ಪ್ರಶಂಸನೀಯವಾದುದು ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿ, ಖ್ಯಾತ ಸಂಗೀತ ಕಲಾವಿದೆ, ವಿದುಷಿ ಸುಚಿತ್ರಾ ಹೊಳ್ಳ ಮಾತನಾಡಿ ಸಂಗೀತ ಕಾರ್ಯಕ್ರಮಗಳಲ್ಲಿ ವೈವಿದ್ಯತೆಯನ್ನು ಮೂಡಿಸುವ ಉದ್ದೇಶದಿಂದ ಹೊಸ ಹೊಸ ರಾಗಗಳ ಪರಿಚಯ ಮತ್ತು ಹೊಸ ಹೊಸ ಅಪರೂಪದ ಕೃತಿಗಳ ಪರಿಚಯ ಮಾಡುವುದು ಈ ಶಿಬಿರದ ಉದ್ದೇಶವಾಗಿದೆ ಎಂದ ಅವರು 2004ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಈ ಎತ್ತರಕ್ಕೆ ಬೆಳೆದು ನಿಂತಿದೆ, 2014ರಲ್ಲಿ ಸರಣಿ ಸಂಗೀತ ಕಾರ್ಯಕ್ರಮ ಆರಂಭಿಸಿದ್ದು, ಆ ವಿದ್ಯಾರ್ಥಿಗಳಿಗೂ ಈ ಶಿಬಿರ ಅತ್ಯಂತ ಪ್ರಯೋಜನಕಾರಿ ಆಗಿ ಪರಿಣಮಿಸಿದೆ ಎಂದರು.
ಪುತ್ತೂರು ಕೀರ್ತನಾ ಡೆವಲಪರ್ಸ್ ಮಾಲಕರಾದ ಶ್ರೀಮತಿ ವೀಣಾ ಪಿ.ಎಸ್. ವರ್ಮ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಮೂಲಕ ಇನ್ನಷ್ಟು ಪ್ರತಿಭೆಗಳು ಹೊರ ಬರಲಿ ಎಂದು ಶುಭ ಹಾರೈಸಿದರು. ಸಾಧನಾ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರ ಹೊಳ್ಳ ಮಾತನಾಡಿ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಸರಿಯಾಗಿ ಪಡೆದುಕೊಂಡು ಸಂಗೀತ ಜ್ಞಾನವನ್ನು ವೃದ್ಧಿಸಬೇಕು ಎಂದರು.
120 ವಿದ್ಯಾರ್ಥಿಗಳು ಭಾಗಿ:
ಶಿಬಿರದಲ್ಲಿ ಉಡುಪಿ, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲ್ಲೂಕು ವ್ಯಾಪ್ತಿಯಿಂದ ಆಗಮಿಸಿದ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರಾರ್ಥಿಗಳಾದ ವೈಷ್ಣವಿ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೈಷ್ಣವಿ ಆಚಾರ್ಯ ಸ್ವಾಗತಿಸಿ, ತೇಜಸ್ವಿನಿ ಕುಕ್ಕಿಲ ವಂದಿಸಿದರು. ಪ್ರಿಯಂವದ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ಕಾರ್ಯಕ್ರಮ:
ಶಿಬಿರ ಮಧ್ಯೆ ಮಧ್ಯಾಹ್ನ 1-30ರಿಂದ ಕಾಸರಗೋಡು ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್‌ರವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಯೋಲಿನ್‌ನಲ್ಲಿ ವಿದ್ವಾನ್ ಚೇತನ್ ಸಿ. ಮೈಸೂರು, ಮೃದಂಗದಲ್ಲಿ ವಿದ್ವಾನ್ ವಸಂತಕೃಷ್ಣ ಕಾಂಚನ, ಘಟಂ-ವಿದ್ವಾನ್ ಕೊಟ್ಟಾಯಂ ಉನ್ನಿಕೃಷ್ಣನ್ ಸಹಕರಿಸಿದರು.







