ಕಲ್ಲಿದ್ದಲು ಹಗರಣ ಪ್ರಕರಣ:ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಗುಪ್ತಾ ದೋಷಿ
.jpg)
ಹೊಸದಿಲ್ಲಿ,ಮೇ 19: ಕಲ್ಲಿದ್ದಲು ಹಗರಣ ಪ್ರಕರಣವೊಂದರಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ಅವರು ದೋಷಿಯೆಂದು ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ಘೋಷಿಸಿದೆ.
ಕೆಎಸ್‌ಎಸ್‌ಪಿಎಲ್‌ಗೆ ಮಧ್ಯಪ್ರದೇಶದ ಥೆಸ್ಗೋರಾ-ಬಿ ರುದ್ರಪುರಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಕಲ್ಲಿದ್ದಲು ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಕೆ.ಎಸ್.ಕ್ರೋಫಾ ಮತ್ತು ಆಗಿನ ನಿರ್ದೇಶಕ ಕೆ.ಸಿ. ಸಮಾರಿಯಾ, ಕೆಎಸ್‌ಎಸ್‌ಪಿಎಲ್ ಮತ್ತು ಅದರ ನಿರ್ದೇಶಕ ಪವನಕುಮಾರ್ ಅಹ್ಲುವಾಲಿಯಾ ಅವರನ್ನೂ ದೋಷಿಗಳೆಂದು ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ ಅವರು ಪ್ರಕಟಿಸಿದರು. ಚಾರ್ಟರ್ಡ್ ಅಕೌಂಟಂಟ್ ಅಮಿತ್ ಗೋಯಲ್ ರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ಮೇ 22ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಕಲ್ಲಿದ್ದಲು ಗಣಿ ಹಂಚಿಕೆಯನ್ನು ಕೋರಿ ಕೆಎಸ್‌ಎಸ್‌ಪಿಎಲ್ ಸಲ್ಲಿಸಿದ್ದ ಅರ್ಜಿಯು ಅಪೂರ್ಣವಾಗಿತ್ತು ಮತ್ತು ಅದು ನಿಗದಿತ ಮಾರ್ಗಸೂಚಿಗೆ ಅನುಗುಣವಾಗಿರಲಿಲ್ಲ, ಹೀಗಾಗಿ ಸಚಿವಾಲಯವು ಅದನ್ನು ತಿರಸ್ಕರಿಸಬೇಕಾಗಿತ್ತು ಎಂದು ಸಿಬಿಐ ವಿಚಾರಣೆ ಸಂದರ್ಭ ವಾದಿಸಿತ್ತು.
ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆರೋಪಿಗಳ ವಿರುದ್ಧ ಆರೋಪ ಗಳನ್ನು ರೂಪಿಸಿತ್ತು. ಮೇಲ್ನೋಟಕ್ಕೆ ಕಾನೂನು ಮತ್ತು ಕಲ್ಲಿದ್ದಲು ಗಣಿ ಹಂಚಿಕೆ ವಿಷಯದಲ್ಲಿ ತನ್ನಲ್ಲಿರಿಸಿದ್ದ ನಂಬಿಕೆಯನ್ನು ಉಲ್ಲಂಘಿಸಿದ್ದ ಗುಪ್ತಾ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿಯನ್ನೂ ಹೊಂದಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ‘ಕತ್ತಲಲ್ಲಿ’ ಇಟ್ಟಿದ್ದರು ಎಂದು ನ್ಯಾಯಾಲಯವು ಆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿತ್ತು.







