ಅನುರಾಗ್ ನಿಗೂಢ ಸಾವಿನ ಬಗ್ಗೆ ಯಾವುದೇ ತನಿಖೆಗೆ ಸಿದ್ಧ: ಸಚಿವ ಖಾದರ್

ಮಂಗಳೂರು, ಮೇ 19: ಲಕ್ನೋದಲ್ಲಿ ನಿಗೂಢವಾಗಿ ಮೃತ ಪಟ್ಟಿರುವ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಗ್ಗೆ ಯಾವೂದೇ ರೀತಿಯ ತನಿಖೆಗೂ ಸರಕಾರ ಸಿದ್ಧವಿದೆ. ರಾಜ್ಯ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಮತ್ತು ಆಧಾರರಹಿತ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಆಯುಕ್ತರಾಗಿದ್ದ ತಿವಾರಿ ಜನವರಿ 4ರಿಂದ 132 ದಿನಗಳ ಕಾಲ ಇಲಾಖೆಯಲ್ಲಿದ್ದರು. ಈ ಪೈಕಿ 37 ದಿನಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಅವರು ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಉತ್ತರ ಪ್ರದೇಶದ ಚುನಾವಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಅವರು ಜೂನ್ 5ರವರೆಗೆ ರಜೆ ಕೋರಿದ್ದರು.ಆದರೆ ಅವರ ಸಾವು ಉತ್ತರ ಪ್ರದೇಶದ ಸರಕಾರಿ ಅತಿಥಿಗೃಹದ ಬಳಿ ನಡೆದಿದೆ ಎನ್ನಲಾಗಿದ್ದು, ಆ ಬಳಿಕ ಕರ್ನಾಟಕ ಸರಕಾರದ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಈ ಆರೋಪಗಳ ಬಗ್ಗೆ ಅನುರಾಗ್ ತಿವಾರಿಯಾಗಲಿ, ಇಲಾಖೆಯವರಾಗಲಿ ತನ್ನ ಗಮನಕ್ಕೆ ತಂದಿಲ್ಲ. ಇವೆಲ್ಲಾ ಆಧಾರ ರಹಿತ ಆರೋಪಗಳಾಗಿವೆ. ಆದರೂ ವಿಪಕ್ಷಗಳು ಅಧಿಕಾರಿಯ ಸಾವಿನಲ್ಲೂ ರಾಜಕೀಯ ಮಾಡುತ್ತಿವೆ ಎಂದು ದೂರಿದರು.
ತಿವಾರಿ ಸಾವಿನ ಪ್ರಕರಣದ ಸಿಬಿಐ ಮೂಲಕ ತನಿಖೆ ಮಾಡಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆ. ಮೃತದೇಹ ಪತ್ತೆಯಾದ ಪ್ರದೇಶದಲ್ಲಿ ಅವರ ಸಾವು ಹೇಗೆ ಸಂಭವಿಸಿದೆ ಎಂಬುದನ್ನು ಅಲ್ಲಿನ ರಾಜ್ಯ ಸರಕಾರ ಕ್ರಮ ಕೈ ಗೊಳ್ಳಬೇಕಾಗಿದೆ. ಉಳಿದಂತೆ ಕರ್ನಾಟಕ ಸರಕಾರದಿಂದ ಈ ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಯು.ಟಿ.ಖಾದರ್ ತಿಳಿಸಿದರು.
ಆಹಾರ ಇಲಾಖೆಯಲ್ಲಿ ಯಾವ ಹಗರಣವೂ ನಡೆದಿಲ್ಲ
ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆಯ ಇಲಾಖೆಯಲ್ಲಿ ಯಾವ ಹಗರಣವೂ ನಡೆದಿಲ್ಲ. ಈ ಬಗ್ಗೆ ಕೇಳಿಬರುತ್ತಿರುವ ಆರೋಪಗಳು ಆಧಾರ ರಹಿತವಾಗಿವೆ. ಅನುರಾಗ್ ಸಾವಿನ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಲು ರಾಜ್ಯದಿಂದ ಏಳು ಮಂದಿ ಅಧಿಕಾರಿಗಳು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವೀಕ್ಷಕ ಬಿ.ನಾರಾಯಣ ರಾವ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.







