ಹುತಾತ್ಮನ ಕುಟುಂಬದ ಅನಿರ್ದಿಷ್ಟಾವಧಿ ನಿರಶನ, ಗ್ರಾಮಕ್ಕೆ ಉ.ಪ್ರ.ಮುಖ್ಯಮಂತ್ರಿ ಭೇಟಿಗೆ ಆಗ್ರಹ

ಸಂಭಲ್,ಮೇ 19: ಕಳೆದ ವರ್ಷದ ಅ.16ರಂದು ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ ಸಿಪಾಯಿ ಸುದೇಶ ಕುಮಾರ್ ಅವರ ಕುಟುಂಬ ಸದಸ್ಯರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಪನಸುಖಾ ಮಿಲಾಕ್ ಗ್ರಾಮಕ್ಕೆ ಭೇಟಿ ನೀಡಬೇಕಂದು ಅವರು ಆಗ್ರಹಿಸುತ್ತಿದ್ದಾರೆ. ಉಪವಾಸ ಮುಷ್ಕರದಲ್ಲಿ ಗ್ರಾಮಸ್ಥರೂ ಪಾಲ್ಗೊಂಡಿದ್ದಾರೆ.
ಹುತಾತ್ಮ ಯೋಧನ ಕುಟುಂಬಕ್ಕೆ ಎಲ್ಲ ನೆರವು ನೀಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರಾದರೂ ಅವರ ಪೈಕಿ ಒಬ್ಬರೂ ಮತ್ತೊಮ್ಮೆ ತಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಮಗೆ ಪೆಟ್ರೋಲ್ ಪಂಪ್ ಮಂಜೂರು ಮಾಡುವುದಾಗಿ, ಜೊತೆಗೆ ಗ್ರಾಮದಲ್ಲಿ ರಸ್ತೆ ಮತ್ತು ಸ್ಮಾರಕ ನಿರ್ಮಾಣ, ಸ್ಥಳೀಯ ಪ್ರಾಥಮಿಕ ಶಾಲೆಗೆ ಸುದೇಶರ ನಾಮಕರಣ ದ ಬಗ್ಗೆಯೂ ಬಿಜೆಪಿ ನಾಯಕರು ಭರವಸೆ ನೀಡಿದ್ದರು ಎಂದು ಹುತಾತ್ಮ ಯೋಧನ ಸೋದರ ಮನೋಜ ಕುಮಾರ ತಿಳಿಸಿದರು.
ನಾವು ಸ್ಥಳೀಯ ಬಿಜೆಪಿ ನಾಯಕರಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಮುಖ್ಯಮಂತ್ರಿಗಳು ನಮ್ಮನ್ನು ಭೇಟಿಯಾಗಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ಇನ್ನೋರ್ವ ಸೋದರ ಅನಿಲ ಕುಮಾರ ತಿಳಿಸಿದರು.
ಈ ಹಿಂದೆ ಸುದೇಶ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಾಗಲೂ ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ ಸ್ಥಳಕ್ಕೆ ಬರುವವರೆಗೂ ಅಂತ್ಯಸಂಸ್ಕಾರ ನಡೆಸುವು ದಿಲ್ಲ ಎಂದು ಅವರ ಕುಟುಂಬವು ಪಟ್ಟು ಹಿಡಿದಿತ್ತು.
ಅಖಿಲೇಶ್ ಹುತಾತ್ಮ ಯೋಧನ ಕುಟುಂಬವನ್ನು ಭೇಟಿ ಮಾಡದ್ದನ್ನೇ ಬಿಜೆಪಿ ನಾಯಕರು ವಿಧಾನಸಭಾ ಚುನಾವಣೆಯ ಸಂದರ್ಭ ರಾಜಕೀಯ ವಿಷಯವನ್ನಾಗಿ ಮಾಡಿದ್ದರು.







