ಇರಾನ್ ಅಧ್ಯಕ್ಷೀಯ ಚುನಾವಣೆ: ಮತದಾರರ ಉತ್ತಮ ಪ್ರತಿಕ್ರಿಯೆ
ಪರಮಾಣು ಒಪ್ಪಂದದ ಬಳಿಕದ ಪ್ರಥಮ ಚುನಾವಣೆ

ಟೆಹ್ರಾನ್, ಮೇ 19: ಶಕ್ತ ರಾಷ್ಟ್ರಗಳೊಂದಿಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇರಾನಿನಲ್ಲಿ ನಡೆಯುತ್ತಿರುವ ಪ್ರಪ್ರಥಮ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಸನ್ ರೂಹಾನಿ ನಾಲ್ಕನೇ ಅವಧಿಯ ಅಧಿಕಾರಕ್ಕೆ ಸ್ಪರ್ಧಿಸುತ್ತಿದ್ದು ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಕಳೆದ ಬಾರಿಗಿಂತ ಮತದಾನದ ಪ್ರಮಾಣ ಹೆಚ್ಚುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ತೀವ್ರವಾದಿಗಳ ವಿರೋಧದ ಮಧ್ಯೆಯೂ ಹಸನ್ ಅನುಸರಿಸಿದ ಸೌಮ್ಯವಾದಿ ನೀತಿ ಮಹತ್ವದ ಪರಮಾಣು ಒಪ್ಪಂದಕ್ಕೆ ದಾರಿಮಾಡಿಕೊಟ್ಟಿದ್ದು ಇದರ ಬಗ್ಗೆ ಜನಾಭಿಮತ ಎಂದು ಈ ಚುನಾವಣೆಯನ್ನು ವಿಶ್ಲೇಷಿಸಲಾಗಿದೆ.
ಜನ ಯಾರನ್ನೇ ಅಧ್ಯಕ್ಷರೆಂದು ಚುನಾಯಿಸಲಿ, ಅವರು ತಮ್ಮ ಜವಾಬ್ದಾರಿ ನಿಭಾಯಿಸಲು ದೇಶದ ಎಲ್ಲಾ ಜನರ ಸಹಕಾರ ಪಡೆಯಲಿದ್ದಾರೆ . ನಾಳೆಯಿಂದ ದೇಶದ ಜನರೆಲ್ಲಾ ಸಂಘಟಿತರಾಗಿ ಖುಷಿಯಿಂದ ನೂತನ ಅಧ್ಯಕ್ಷರನ್ನು ಬೆಂಬಲಿಸಲಿದ್ದಾರೆ ಎಂದು ತಮ್ಮ ಮತ ಚಲಾಯಿಸಿದ ಬಳಿಕ ಹಸನ್ ಪ್ರತಿಕ್ರಿಯಿಸಿದ್ದಾರೆ. ದೇಶದಾದ್ಯಂತ 63000 ಮತದಾನ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದ್ದು 56 ಮಿಲಿಯನ್ ಅರ್ಹ ಮತದಾರರಿದ್ದಾರೆ. ಆರ್ಥಿಕ ವಿಷಯ ಚುನಾವಣೆಯ ಪ್ರಮುಖ ಅಂಶವಾಗಲಿದ್ದು ಹಲವು ಮತಗಟ್ಟೆಗಳಲ್ಲಿ 2013ರ ಚುನಾವಣೆ ಗಿಂತ ಅಧಿಕ ಸಂಖ್ಯೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ಪತ್ರಕರ್ತರು ಟೆಹ್ರಾನ್‌ನಲ್ಲಿ ತಿಳಿಸಿದ್ದಾರೆ. ಮತದಾನದ ಪ್ರಮಾಣ ಹೆಚ್ಚಾದಷ್ಟೂ ಹಸನ್ ಗೆಲುವಿನ ಸಾಧ್ಯತೆ ಹೆಚ್ಚಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಲ್ಲಿ 55 ಮತದಾನ ಕೇಂದ್ರ ಸೇರಿದಂತೆ ವಿಶ್ವದ 300 ಸ್ಥಳಗಳಲ್ಲಿ ಸಾಗರೋತ್ತರ ಮತದಾರರಿಗೆ ಮತದಾನದ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದಲ್ಲಿ 1 ಮಿಲಿಯಕ್ಕೂ ಹೆಚ್ಚು ಇರಾನಿಯನ್ನರು ವಾಸಿಸುತ್ತಿದ್ದಾರೆ.
ದೇಶದ ಅತ್ಯಂತ ಪ್ರಭಾವೀ ವ್ಯಕ್ತಿಯಾಗಿರುವ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಮೊದಲು ಮತದಾನ ಮಾಡುವ ಮೂಲಕ ಮತದಾನ ಪ್ರಕ್ರಿಯೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಪ್ರತಿಯೊಬ್ಬ ಅರ್ಹ ಮತದಾರರೂ ತಮ್ಮ ಹಕ್ಕು ಚಲಾಯಿಸುವಂತೆ ಜನತೆಗೆ ಕರೆ ನೀಡಿದರು. ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಮತ್ತು ದೇಶದ ಭವಿಷ್ಯ ಜನತೆಯ ಕೈಯಲ್ಲಿದೆ ಎಂದು ಅವರು ಹೇಳಿದರು.
ಹಾಲಿ ಅಧ್ಯಕ್ಷ ಹಸನ್‌ಗೆ ತ್ರಿಕೋನ ಸ್ಪರ್ಧೆ ಎದುರಾಗಿದ್ದು 56ರ ಹರೆಯದ ತೀವ್ರವಾದಿ ಧಾರ್ಮಿಕ ಮುಖಂಡ ಇಬ್ರಾಹಿಂ ರಾಸಿ ಅವರು ಅತ್ಯಂತ ನಿಕಟ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಖಾಮಿನೈಗೆ ನಿಕಟವರ್ತಿ ಎನ್ನಲಾಗಿರುವ ರಾಸಿ, ಮಾಜಿ ಅಭಿಯೋಜಕರು ಹಾಗೂ ಕಾನೂನು ಪ್ರಾಧ್ಯಾಪಕರು. ಪ್ರಭಾವೀ ಧಾರ್ಮಿಕ ಪ್ರತಿಷ್ಠಾನವೊಂದರ ಮುಖ್ಯಸ್ಥನಾಗಿರುವ ರಾಸಿ, ಖಮೇನಿಯ ಉತ್ತರಾಧಿಕಾರಿ ಎಂದೂ ಹೇಳಲಾಗುತ್ತಿದೆ. ಅದಾಗ್ಯೂ ಖಾಮಿನೈ ಯಾರನ್ನೂ ತಮ್ಮ ಉತ್ತರಾಧಿಕಾರಿ ಎಂದು ಈವರೆಗೆ ಬಿಂಬಿಸಿಲ್ಲ.
ದೇಶದ ಎರಡು ಪ್ರಮುಖ ಧಾರ್ಮಿಕ ಸಂಸ್ಥೆಗಳ ಬೆಂಬಲ ಪಡೆದಿರುವ ರಾಸಿ, ಬಡಜನರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳು ತಮ್ಮಲ್ಲಿವೆ ಎಂದು ಹೇಳಿಕೊಂಡಿದ್ದಾರೆ. ಜನಪ್ರಿಯತೆ ,ಭ್ರಷ್ಟಾಚಾರದ ವಿರುದ್ಧದ ಕಠಿಣ ನಿಲುವು,1988ರಲ್ಲಿ ತನ್ನ ಸಹವಾಸಿಗಳಾಗಿದ್ದ ಸಾವಿರಾರು ರಾಜಕೀಯ ಕೈದಿಗಳ ಸಾಮೂಹಿಕ ಮರಣದಂಡನೆಯನ್ನು ಖಂಡಿಸಿ ಇವರು ತಳೆದಿದ್ದ ನಿಲುವು- ಈ ಕಾರಣಗಳಿಂದ ಸಂಪ್ರದಾಯವಾದಿ ಗ್ರಾಮೀಣ ಮತ್ತು ದುಡಿಯುವ ವರ್ಗದ ಜನರ ಬೆಂಬಲ ರಾಸಿಗೆ ಇದೆ ಎಂದು ನಿರೀಕ್ಷಿಸಲಾಗಿದೆ. ಚುನಾವಣೆಯ ಫಲಿತಾಂಶಕ್ಕೆ ಎಲ್ಲರೂ ಬದ್ಧರಾಗಿರಬೇಕು . ಇದು ನನಗೂ ಅನ್ವಯಿಸುತ್ತದೆ ಎಂದು ಮತದಾನ ಮಾಡಿದ ಬಳಿಕ ರಾಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
2001ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ , ಸುಧಾರಣಾವಾದಿ ಮುಸ್ತಫ ಹಷೆಮಿತಬ ಮತ್ತು ಮಾಜಿ ಸಾಂಸ್ಕೃತಿಕ ಸಚಿವ ಮುಸ್ತಫ ಮೀರ್‌ಸಲೀಂ ಕಣದಲ್ಲಿರುವ ಇತರ ಇಬ್ಬರು ಅಭ್ಯರ್ಥಿಗಳು. ತೀವ್ರವಾದಿಗಳು ಅಮೆರಿಕದ ಬಗ್ಗೆ ಸಂಶಯಾತ್ಮಕ ಧೋರಣೆ ಹೊಂದಿದ್ದಾರೆ.
ಮತದಾನಕ್ಕಿಂತ 24 ಗಂಟೆಗಳ ಮೊದಲು ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿದ್ದರೂ, ಇಬ್ಬರು ಪ್ರಮುಖ ಅಭ್ಯರ್ಥಿಗಳ ಬೆಂಬಲಿಗರು ಗುರುವಾರ ತಡರಾತ್ರಿವರೆಗೂ ನಗರದ ಬೀದಿಗಳಲ್ಲಿ ಸಂಗೀತ, ಘೋಷಣೆಗಳ ಹಿಮ್ಮೇಳದೊಂದಿಗೆ ವಾಹನಗಳಲ್ಲಿ ತಮ್ಮ ನಾಯಕನ ಬೃಹತ್ ಕಟೌಟ್ ಇಟ್ಟು ಮೆರವಣಿಗೆ ನಡೆಸುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಪ್ರಮುಖ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.







