ಅಸಾಂಜ್ ವಿರುದ್ದದ ಅತ್ಯಾಚಾರ ಪ್ರಕರಣದ ತನಿಖೆ ಕೈಬಿಡಲು ನಿರ್ಧಾರ

ಸ್ಟಾಕ್‌ಹೋಮ್, ಮೇ 19: ವಿಕಿಲೀಕ್ ಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧ ದಾಖಲಾಗಿದ್ದು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸ್ವೀಡನ್‌ನ ಅಭಿಯೋಜಕರು ಕೈಬಿಟ್ಟಿದ್ದು ಇದು 2012ರಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ದೂತಾವಾಸದಲ್ಲಿ ಆಶ್ರಯ ಪಡೆದಿರುವ ಅಸಾಂಜ್‌ಗೆ ದೊರಕಿದ ಕಾನೂನಾತ್ಮಕ ಗೆಲುವು ಎಂದು ವ್ಯಾಖ್ಯಾನಿಸಲಾಗಿದೆ.
ಆದರೆ ಅಸಾಂಜ್ ದೂತಾವಾಸ ಬಿಟ್ಟು ತೆರಳಲು ಮುಂದಾದರೆ ಅವರನ್ನು ಬಂಧಿಸಲಾಗುವುದು ಎಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ. 2012ರಲ್ಲಿ ಅಸಾಂಜ್ ವಿರುದ್ದ ಬಂಧನ ವಾರಂಟ್ ಜಾರಿಗೊಳಿಸಿದಾಗ , ಜಾಮೀನು ಅರ್ಜಿಯ ಷರತ್ತು ಉಲ್ಲಂಘಿಸಿ ನ್ಯಾಯಾಲಯಕ್ಕೆ ಶರಣಾಗಲು ವಿಫಲವಾಗಿರುವ ಕಾರಣ ಅಸಾಂಜ್ ಬಂಧನ ಅನಿವಾರ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಾಂಜ್ ವಿರುದ್ಧದ ಅರೆಸ್ಟ್ ವಾರಂಟನ್ನು ನವೀಕರಿಸಲು ಶುಕ್ರವಾರ ಅಂತಿಮ ದಿನವಾಗಿತ್ತು. ಅಸಾಂಜ್ ವಿರುದ್ಧ ದಾಖಲಾಗಿದ್ದ ಶಂಕಿತ ಅತ್ಯಾಚಾರದ ಪ್ರಕರಣದ ವಿಚಾರಣೆಯನ್ನು ಕೈಬಿಡಲು ಸಾರ್ವಜನಿಕ ಅಭಿಯೋಜಕರಾದ ಮರಿಯನ್ ನೈ ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅಸಾಂಜ್, ಟ್ವಿಟರ್‌ನಲ್ಲಿ ತನ್ನ ನಗುಮುಖದ ಫೋಟೋ ಪೋಸ್ಟ್ ಮಾಡಿ ಪ್ರತಿಕ್ರಿಯೆ ಸೂಚಿಸಿದ್ದಾರೆ. ಈ ಫೋಟೋಗೆ ಯಾವುದೇ ಅಡಿಬರಹ ನೀಡಲಾಗಿಲ್ಲ. ಈ ಆದೇಶ ‘ಸಂಪೂರ್ಣ ಗೆಲುವು’ ಎಂದು ಅಸಾಂಜೆಯ ಕಾನೂನು ಸಲಹೆಗಾರರ ತಂಡದ ಸದಸ್ಯ ಪಿಯರ್ ಸಾಮ್ಯುವೆಲ್ಸನ್ ಸ್ವೀಡನ್ ರೇಡಿಯೋಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ತೀರ್ಪಿನ ಬಳಿಕ ತಾನು ಬಯಸಿದಾಗ ಅಸಾಂಜೆ ದೂತಾವಾಸ ಬಿಟ್ಟು ತೆರಳಬಹುದಾಗಿದೆ. ಅವರು ಹೀಗೆ ಮಾಡದಂತೆ ತಡೆಯಲು ಇನ್ನು ಸ್ವೀಡನ್ ಸರಕಾರಕ್ಕೆ ಸಾಧ್ಯವಿಲ್ಲ ಎಂದವರು ತಿಳಿಸಿದರು. ಈ ತೀರ್ಪಿಗಾಗಿ ಸುದೀರ್ಘಾವಧಿಯಿಂದ ಕಾಯುತ್ತಿದ್ದುದಾಗಿ ಇನ್ನೋರ್ವ ವಕೀಲ ಕ್ರಿಸ್ಟೋಫ್ ಮರ್ಚಂಡ್ ತಿಳಿಸಿದ್ದಾರೆ.
ಜೂಲಿಯನ್ ಅಸಾಂಜೆಯನ್ನು ಬಲಿಪಶುವನ್ನಾಗಿ ಮಾಡಲಾಗಿತ್ತು. ಅವರಿಗಾದ ಅನ್ಯಾಯಕ್ಕೆ ಇದು ಅಂತ್ಯಹಾಡಲಿದೆ ಎಂಬುದೇ ಸಂತಸದ ವಿಷಯ ಎಂದು ಪ್ರಧಾನ ಅಭಿಯೋಜಕರಾದ ಇಂಗ್ರಿಡ್ ಇಸ್‌ಗ್ರೇನ್ ಮತ್ತು ಮರಿಯನ್ ನೈ ಸ್ಟಾಕ್‌ಹೋಮ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ವಿಕಿಲೀಕ್ಸ್ ಸಮ್ಮೇಳನವೊಂದರ ಸಂದರ್ಭ ಅಸಾಂಜ್ ತನ್ನ ಸಮ್ಮತಿಯಿಲ್ಲದೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ಯುವತಿಯೋರ್ವಳು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ 2010ರಲ್ಲಿ ಆಸ್ಟ್ರೇಲಿಯಾ ಮೂಲದ ಅಸಾಂಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಆದರೆ ಇದನ್ನು ಅಸಾಂಜ್ ನಿರಾಕರಿಸುತ್ತಲೇ ಬಂದಿದ್ದರು. ಈ ಪ್ರಕರಣದ ಆರೋಪಿಯಾಗಿದ್ದ ತಮ್ಮನ್ನು ಅಮೆರಿಕಕ್ಕೆ ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದರಿತ ಅಸಾಂಜ್ 2012ರಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ದೂತಾವಾಸದಲ್ಲಿ ಆಶ್ರಯ ಪಡೆದಿದ್ದರು. ಅಸಾಂಜೆ ಅಮೆರಿಕದ ರಕ್ಷಣಾ ಇಲಾಖೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ‘ವಿಕಿಲೀಕ್ಸ್’ ಮೂಲಕ ಬಹಿರಂಗಪಡಿಸಿ, ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದರು.







