‘ಲೈಂಗಿಕ ಹಿಂಸೆ ಪ್ರಕರಣ ತಡೆಯುವಲ್ಲಿ ಮಹಿಳಾ ಆಯೋಗ ವಿಫಲ’
ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ವಿರೋಧಿಸಿ ಪ್ರತಿಭಟನೆ
ಬೆಂಗಳೂರು, ಮೇ 19: ಲೈಂಗಿಕ ಹಿಂಸೆಯ ಪ್ರಕರಣಗಳನ್ನು ತಡೆಯುವಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಲೈಂಗಿಕ ಹಿಂಸೆ ವಿರೋಧಿ ಜನಚಳವಳಿ ಗಂಭೀರ ಆರೋಪ ಮಾಡಿದೆ.
ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ರಾಜಧಾನಿ ಬೆಂಗಳೂರಿನ ವೀರಭದ್ರನಗರದಲ್ಲಿ ಆರು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಘಟನೆಯನ್ನು ವಿರೋಧಿಸಿ ಲೈಂಗಿಕ ಹಿಂಸೆ ವಿರೋಧಿ ಚಳವಳಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಲೈಂಗಿಕ ಹಿಂಸೆ ವಿರೋಧಿ ಜನಚಳವಳಿ ಕಾರ್ಯಕರ್ತೆ ಮಲ್ಲಿಗೆ, ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಲ್ಲದೆ, ಇದನ್ನು ತಡೆಯುವಲ್ಲಿ ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.
ಇತ್ತೀಚಿಗಷ್ಟೆ ಬೆಂಗಳೂರಿನ ವೀರಭದ್ರನಗರದಲ್ಲಿ ಆರು ವರ್ಷದ ಮಗುವನ್ನು ನೆರೆಮನೆಯಾತನೆ ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿ, ಬಚ್ಚಿಟ್ಟು ನಾಲ್ಕು ದಿನಗಳ ನಂತರ ಮಗುವಿನ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಂತಹ ಅಮಾನವೀಯ ಘಟನೆ ನಡೆದಿದೆ. ಅದೇ ರೀತಿ, ರಾಜ್ಯದಲ್ಲೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೆ, ಇದುವರೆಗೂ ರಾಜ್ಯ ಸರಕಾರ ಮತ್ತು ಮಹಿಳಾ ಆಯೋಗ ಯಾವುದೇ ದಿಟ್ಟ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೃಶ್ಯ ಮಾಧ್ಯಮಗಳು ಮತ್ತು ಇಂಟರ್‌ನೆಟ್‌ಗಳಲ್ಲಿ ಅಶ್ಲೀಲತೆಯನ್ನು ತಡೆಗಟ್ಟಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದ ಅವರು, ಸಿನಿಮಾಗಳಲ್ಲಿ ಬಲಾತ್ಕಾರದ ಲೈಂಗಿಕ ದೌರ್ಜನ್ಯ-ಅತ್ಯಾಚಾರಗಳನ್ನು ವೈಭವೀಕರಿಸುವ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಿಸಬೇಕೆಂದು ಮಲ್ಲಿಗೆ ಒತ್ತಾಯಿಸಿದರು.
ಮನವಿ: ಪ್ರತಿಭಟನೆಯ ಕಾರ್ಯಕರ್ತರನ್ನು ಭೇಟಿಯಾದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರಿಗೆ ಲೈಂಗಿಕ ಹಿಂಸೆ ವಿರೋಧಿ ಜನಚಳವಳಿ ಸದಸ್ಯರು, ಕರ್ನಾಟಕ ಕೋಮುಸೌಹಾರ್ದ ವೇದಿಕೆ, ಮಹಿಳಾ ಮುನ್ನಡೆ, ಗಾರ್ಮೆಂಟ್ಸ್ ಕಾರ್ಮಿಕ ಒಕ್ಕೂಟ, ಕರ್ನಾಟಕ ವಿದ್ಯಾರ್ಥಿ ಸಂಘ, ಯುವ ಮುನ್ನಡೆ ಸೇರಿ ಪ್ರಮುಖರು ಮನವಿ ಪತ್ರ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟುಹಿಡಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿ ಶೀಲಾರಾಮನಾಥನ್, ಹೋರಾಟಗಾರರಾದ ಗೌರಿ, ತ್ರೀಮೂರ್ತಿ ಸೇರಿ ಪ್ರಮುಖರು ಹಾಜರಿದ್ದರು.