ಪ್ರಕೃತಿ ವಿಕೋಪ: ಮುಂಜಾಗ್ರತೆಗೆ ಸುನಾಮಿ ಕೇಂದ್ರ ಸ್ಥಾಪನೆ: ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ

ಕಾರವಾರ, ಮೇ 19: ಸುನಾಮಿಯಂಥ ಪ್ರಕೃತಿ ವಿಕೋಪ ಗಳಾದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಅತ್ಯವಶ್ಯಕವಾಗಿದೆ ಎಂದು ಪಶ್ಚಿಮ ನೌಕಾ ವಲಯದ ಕಮಾಂಡಿಂಗ್ ಆಫೀಸರ್ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ಹೇಳಿದ್ದಾರೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುನಾಮಿ ಅಣಕು ಕಾರ್ಯಾಚರಣೆ ವೇಳೆ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಕೃತಿ ವಿಕೋಪಗಳ ಬಗ್ಗೆ ಪ್ರತಿ ಕ್ಷಣವೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದು ಒಬ್ಬರಿಂದ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಭವಿಸಬಹುದಾದ ಸುನಾಮಿಗಳ ಬಗ್ಗೆ ಮುಂಜಾಗ್ರತೆ ವಹಿಸಲು ಸುನಾಮಿ ಸೆಂಟರ್ ತೆರೆಯಲಾಗಿದೆ ಎಂದರು.
ಇವು ಸುನಾಮಿಯ ತೀವ್ರತೆ, ಅದರ ಹಾನಿ, ಸುನಾಮಿ ಸಂತ್ರಸ್ತ ಪ್ರದೇಶಗಳ ಮಾಹಿತಿಯನ್ನು ಪಡೆದು ರಕ್ಷಣಾ ಕಾರ್ಯಕ್ಕೆ ಮುಂದಾಗಲಾಗುವುದು. ಹೀಗೆ ಜನಜಾಗೃತಿ ಮೂಡಿಸುವುದರಿಂದ ಸೇನೆಗೂ ಹೆಚ್ಚಿನ ಪ್ರಯೋಜನ ತಂದುಕೊಟ್ಟಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ನಡುವೆ ಹೊಂದಾಣಿಕೆಗೆ ಇದು ಸಹಕಾರಿಯಾಗಿದೆ ಎಂದರು.
ಮಾನ್ಸೂನ್ ವೇಳೆ ಕರಾವಳಿ ಭಾಗದಲ್ಲಿ ಉಂಟಾಗಬಹುದಾದ ಸುನಾಮಿಯಿಂದ ಸಾರ್ವಜನಿಕರ ರಕ್ಷಣೆಗೆ ಸೇನೆ ಸದಾ ಸಿದ್ಧವಿದೆ. ಮಾನ್ಸೂನ್ ಆಗಮನಕ್ಕೂ ಮುನ್ನ ಪ್ರತಿವರ್ಷ ಸುನಾಮಿಯ ರಕ್ಷಣಾ ಕಾರ್ಯಾಚರಣೆಯ ಕುರಿತು ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೆ, ಕಳೆದ 2014ರಿಂದ ನಡೆಯುತ್ತಿರುವ ಸುನಾಮಿ ಅಣಕು ಕಾರ್ಯಾಚರಣೆಯಿಂದ ಸಾಕಷ್ಟು ಉಪಯೋಗವಾಗಿದ್ದು, ಇದು ಸೇನೆಯ ರಕ್ಷಣಾ ಚಟುವಟಿಕೆಗೆ ಸಹಕಾರಿಯಾಗಿದೆ ಎಂದರು.
ಇದೆ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಅವರನ್ನು ಮಾಧ್ಯಮದವರು, ‘ರಾಜ್ಯ ಸರಕಾರ ಕಾರವಾರದಲ್ಲಿ ಏರ್‌ಕ್ರಾಫ್ಟ್ ನಿರ್ಮಾಣಕ್ಕೆ ಜಾಗ ನೀಡಲು ಹಿಂದೇಟು ಹಾಕುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅವರು, ರಾಜ್ಯ ಸರಕಾರದಿಂದ ಸೇನೆಗೆ ಜಾಗ ನೀಡಲಾಗುತ್ತದೆ. ಸೂಕ್ತ ಜಾಗದ ಹುಡುಕಾಟ ನಡೆದಿದೆ ಎಂದರು. ಅಣಕು ಕಾರ್ಯಾಚರಣೆ ವೀಕ್ಷಿಸಲು ಮಾಲ್ಡೀವ್ಸ್, ಬಾಂಗ್ಲಾದೇಶ, ವಿಯೆಟ್ನಾಂನ ಸೇನಾ ಪ್ರತಿನಿಧಿಗಳು ಆಗಮಿಸಿದ್ದರು.







