ಶಿವಮೊಗ್ಗ: ಗಾಳಿ-ಮಳೆಗೆ ಹಲವು ಮರಗಳು ಧರೆಗೆಕತ್ತಲಲ್ಲಿ ಮುಳುಗಿದ ಬಡಾವಣೆಗಳು

ಶಿವಮೊಗ್ಗ, ಮೇ 19: ಒಂದೆಡೆ ಹವಾಮಾನ ಇಲಾಖೆಯು ಪ್ರಸಕ್ತ ವರ್ಷದ ಮುಂಗಾರು ಮಳೆಯು ಜೂನ್ ತಿಂಗಳಿಗಿಂತ ಮೊದಲೇ ಕಾಲಿಡುವ ಸಾಧ್ಯತೆಯಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದೆ. ಮತ್ತೊಂದೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಗುರುವಾರ ಸಂಜೆ ಶಿವಮೊಗ್ಗ ನಗರದಲ್ಲಿ ಗುಡುಗು-ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಗೆ ಸಾಕಷ್ಟು ಅನಾಹುತ ಉಂಟಾಗಿದೆ. ಸುಮಾರು ಒಂದು ಗಂಟೆ ಕಾಲ ಎಡೆಬಿಡದೆ ಬಿದ್ದ ಧಾರಾಕಾರ ಮಳೆಗೆ ನಗರದ ಬಹುತೇಕ ರಾಜಕಾಲುವೆ, ಚರಂಡಿಗಳು ಉಕ್ಕಿ ಹರಿದವು. ಕೆಲವೆಡೆ ರಸ್ತೆಗಳು ಅಕ್ಷರಶಃ ಕೆರೆಗಳಂತಾಗಿ ಪರಿಣಮಿಸಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಉಳಿದಂತೆ ತಗ್ಗು ಪ್ರದೇಶಗಳಲ್ಲಿರುವ ಹಲವು ಬಡಾವಣೆಗಳು ಜಲಾವೃತವಾಗಿದ್ದವು. ಮನೆಗೆ ನುಗ್ಗಿದ ನೀರು ಹೊರ ಹಾಕಲು ನಿವಾಸಿಗಳು ರಾತ್ರಿಯಿಡೀ ಪರದಾಡುವಂತಾಯಿತು.
ಬಿರುಗಾಳಿ ಮಳೆಗೆ ವಿವಿಧ ಬಡಾವಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಮರಗಳು ಉರುಳಿ ಬಿದ್ದಿರುವ ಮಾಹಿತಿಗಳು ಬಂದಿವೆ. ವಿದ್ಯುತ್ ಕಂಬ, ಮನೆ, ಅಂಗಡಿಗಳ ಮೇಲೂ ಮರಗಳು ಬಿದ್ದಿರುವ ಕಾರಣ ಆಸ್ತಿಪಾಸ್ತಿಗೆ ನಷ್ಟವಾಗಿದೆ. ಸಾಗರ ರಸ್ತೆಯಲ್ಲಿ ಸುಮಾರು 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಕೆಲವೆಡೆ ಮರಗಳ ರಂಬೆಕೊಂಬೆಗಳು ವಿದ್ಯುತ್ ಲೈನ್ ಮೇಲೆ ಬಿದ್ದಿವೆ.
ಇದರಿಂದ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವಂತಾಗಿತ್ತು. ನಗರದ ಅರ್ಧದಷ್ಟು ಬಡಾವಣೆಗಳು ಕತ್ತಲಲ್ಲಿ ಮುಳುಗುವಂತಾಯಿತು. ಮುರಿದುಬಿದ್ದ ಮರ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಹಾಗೂ ಸುಗಮ ವಿದ್ಯುತ್ ಪೂರೈಕೆ ಮಾಡಲು ಮಹಾನಗರ ಪಾಲಿಕೆ ಆಡಳಿತ, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡೀ ಹರಸಾಹಸ ನಡೆಸುವಂತಾಗಿತ್ತು. ಸಮರೋಪಾದಿ ಪರಿಹಾರ ಕಾರ್ಯದ ನಡುವೆಯು ಕೆಲ ಬಡಾವಣೆಗಳಲ್ಲಿ ಶುಕ್ರವಾರ ಕೂಡ ವಿದ್ಯುತ್ ಪೂರೈಕೆ ಸಾಧ್ಯವಾಗಿರಲಿಲ್ಲ.
ಕೆಲವೆಡೆ ರಾಜಕಾಲುವೆ, ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡ ಪರಿಣಾಮ ಸುಗಮವಾಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವಂತಾಗಿದೆ. ಮಳೆಗಾಲ ಆರಂಭವಾಗುವುದರೊಳಗೆ ಪಾಲಿಕೆ ಆಡಳಿತವು ರಾಜಕಾಲುವೆ, ಚರಂಡಿಗಳನ್ನು ಸುವ್ಯವಸ್ಥೆಗೊಳಿಸಲು ಗಮನಹರಿಸಬೇಕು ಎಂದು ಮಂಜುನಾಥ ಬಡಾವಣೆಯ ನಿವಾಸಿ ಮಲ್ಲೇಶ್ ಎಂಬವರು ಆಗ್ರಹಿಸುತ್ತಾರೆ.
ಸಂಚಾರ ಅಸ್ತವ್ಯಸ್ತ
ಎಂಎಡಿಬಿನಿಂದ ಗಾಡಿಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿ ಸಿದೆ. ಕೆಲವೆಡೆ ಮರಗಳು ಬಿದ್ದು ಮನೆ, ಕಾಂಪೌಂಡ್ ಗೋಡೆ, ಗೂಡಂಗಡಿಗಳಿಗೆ ಸಾಕಷ್ಟು ನಷ್ಟವಾಗಿದೆ. ಆಯನೂರು ಗೇಟ್ ಸಮೀಪ ಸುಮಾರು 10ಕ್ಕೂ ಹೆಚ್ಚು ವಿದ್ಯುತ್‌ಕಂಬಗಳು ನೆಲ ಕಚ್ಚಿವೆ. ರಸ್ತೆಯಂಚಿನಲ್ಲಿ ನಿಲ್ಲಿಸಿದ್ದ ಲಾರಿಯೊಂದರ ಮೇಲೆ ವಿದ್ಯುತ್ ಕಂಬವೊಂದು ಬಿದ್ದಿದೆ. ಕೆಲವು ಕಂಬಗಳು ಬುಡ ಸಮೇತ ಕಿತ್ತುಬಿದ್ದರೆ, ಇನ್ನೂ ಕೆಲವೆಡೆ ಅರ್ಧಕ್ಕೆ ತುಂಡಾಗಿ ಅಥವಾ ತಿರುವಿ ಬಿದ್ದಿವೆ.
ಆಲ್ಕೊಳ ಸರ್ಕಲ್‌ಬಳಿ ಇರುವ ಮೆಸ್ಕಾಂ ಸ್ಟೇಷನ್ ಎದುರು ಸುಮಾರು 10ಕ್ಕೂ ಹೆಚ್ಚು ಕಂಬಗಳು ಬಿದ್ದಿವೆ. ಇದರಿಂದ ಅಕ್ಕಪಕ್ಕದ ಅಂಗಡಿ ಮತ್ತು ಮನೆಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ. ಮಳೆ ಗಾಳಿಯಿಂದ ರಸ್ತೆಯ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕೆಲ ಸಮಯ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.







