ಗಂಡು ಮಗು ಹೆರಲಿಲ್ಲವೆಂದು ಪತಿಯ ಕಿರುಕುಳ: ಬೆಂಕಿಹಚ್ಚಿ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಗುಜರಾತ್, ಮೇ 19: ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಪತಿ ಹಾಗೂ ಆತನ ಸಂಬಂಧಿಕರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮಹಿಳೆಯೋರ್ವರು 13 ದಿನಗಳ ಮಗು ಸಹಿತ ಮತ್ತೋರ್ವ ಪುತ್ರಿಯರೊಂದಿಗೆ ಆತ್ಮಹತ್ಯೆಗೈದ ಘಟನೆ ಗುಜರಾತ್ ನ ಮೋರ್ಬಿ ಪಟ್ಟಣದಲ್ಲಿ ನಡೆದಿದೆ.
26 ವರ್ಷದ ಶೀತಲ್ ಪಾರ್ಮರ್ ತನ್ನ ಪುತ್ರಿಯರಾದ 13 ದಿನಗಳ ಮಗು ಪಾಯಲ್ ಹಾಗೂ ಜಿಂಕಲ್ (3)ರೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
“ನಾವು ಘಟನಾ ಸ್ಥಳಕ್ಕೆ ತಲುಪಿದಾಗ ಸುಟ್ಟು ಕರಕಲಾದ ಮೂವರ ಶರೀರ ಅಲ್ಲಿತ್ತು. ಶೀತಲ್ ತಾನು ಹಾಗೂ ಇಬ್ಬರ ಮಕ್ಕಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಸಬ್ ಇನ್ಸ್ ಪೆಕ್ಟರ್ ಎಚ್.ಬಿ.ಭಡಾನಿಯಾ ಹೇಳಿದ್ದಾರೆ.
“ಶೀತಲ್ ತಮ್ಮ ಎರಡನೆ ಮಗುವಿಗೆ ಜನ್ಮ ನೀಡಿದ ನಂತರ ಪತಿ ಹಾಗೂ ಆತನ ಪೋಷಕರು ಆಕೆಯ ಮೇಲೆ ನಿರಂತರ ದೌರ್ಜನ್ಯವೆಸಗಿ, ಕಿರುಕುಳ ನೀಡುತ್ತಿದ್ದರು ಎಂದು ಅಮರ್ ಸಿಂಗ್ ಆರೋಪಿಸಿದ್ದಾರೆ” ಎಂದು ಭಡಾನಿಯಾ ಮಾಹಿತಿ ನೀಡಿದ್ದಾರೆ.
ಶೀತಲ್ ರ ಸಹೋದರ ಅಮರ್ ಸಿಂಗ್ ನೀಡಿರುವ ದೂರಿನನ್ವಯ ಮೋರ್ಬಿ ಪೊಲೀಸರು ಶೀತಲ್ ಪತಿ ದಯಾರಾಮ್ ಹಾಗೂ ಸಂಬಂಧಿಕರಾದ ನರಸಿಂಹ್ ,ಮತ್ತು ಶಾರದಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.





