ಮಂಗಳೂರು ವಿವಿ ಶಿಕ್ಷಕೇತರ ಉದ್ಯೋಗಿಗಳಿಂದ ಧರಣಿ
ಕೊಣಾಜೆ, ಮೇ 19: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘದ ವತಿಯಿಂದ ಶುಕ್ರವಾರ ವಿವಿ ಆಡಳಿತ ಸೌಧದ ಮುಂದೆ ಧರಣಿ ನಡೆಯಿತು.
ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ದತಿಯ ರದ್ದತಿ, ಮಂಜೂರಾದ ಹುದ್ದೆಗಳಿಗೆ ಸಿಬ್ಬಂದಿ ನೇಮಿಸದೆ ಇರುವ ಸಿಬ್ಬಂದಿಗೆ ಹೆಚ್ಚಿನ ಹೊರೆ ಹೇರುವುದು ನಿಲ್ಲಿಸಬೇಕು, 200ಕ್ಕೂ ಅಧಿಕ ಇರುವ ಕೇಟರ್ ಶಿಕ್ಷಕೇತರ, ನಿವೃತ್ತಿಯಿಂದ ಖಾಲಿಯಾಗಿರುವ ಹುದ್ದೆಗಳಿಗೆ ಹೊಸಬರನ್ನು ನೇಮಿಸುವ ಮೂಲಕ ನಿವೃತ್ತಿಯಾದವರಿಂದ ಕೆಲಸ ಮಾಡಿಸುವುದು ನಿಲ್ಲಿಸಬೇಕು, 25-30 ವರ್ಷಗಳಿಂದ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗೆ ಭಡ್ತಿ ನೀಡುವುದು, ಉಪನ್ಯಾಸಕರನ್ನು ವಿವಿಯಲ್ಲಿ ವಿಶೇಷಾಧಿಕಾರಿಗಳನ್ನಾಗಿ ನೇಮಿಸದೆ ಅರ್ಹ ಶಿಕ್ಷಕೇತರರನ್ನು ಉಪಕುಲಸಚಿವ, ಸಹಾಯಕ ಕುಲಸಚಿವ ಹುದ್ದೆಗಳಿಗೆ ನೇಮಕ ಮಾಡಬೇಕು.
ತಾಂತ್ರಿಕ ಉದ್ಯೋಗಿಗಳಿಗೆ ಭಡ್ತಿಗೆ ಅವಕಾಶ, ಒಂದೇ ವಿಭಾಗದಲ್ಲಿ 15-20 ವರ್ಷ ದುಡಿಸದೆ ಐದು ವರ್ಷಗಳ ಬಳಿಕ ಬೇರ ವಿಭಾಗಕ್ಕೆ ವರ್ಗಾವಣೆ, ಶುಚಿತ್ವ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ವಿವಿ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಔಷಧ ಇರುವಂತೆ ಮಾಡುವುದು, ಹಾಸ್ಟೆಲ್‌ನಿಂದ ವಿವಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಅಡುಗೆ ಸಿಬ್ಬಂದಿಗೆ ಭಡ್ತಿ, ಸಂಘದ ಕಾರ್ಯಚಟುವಟಿಗಳಿಗೆ ಕೊಠಡಿ ವ್ಯವಸ್ಥೆ, ಮೀಸಲಾತಿ ನಿಯಮ ಮೀರಿ ಹಿಂಬಾಗಿಲಿನಿಂದ ಹೊರಗುತ್ತಿಗೆ/ಗುತ್ತಿಗೆಯಾಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ತಡೆ, ಆರೋಗ್ಯ ಕೇಂದ್ರದ ಸೇವೆ ಮಂಗಳೂರು ವಿವಿ ಕಾಲೇಜಿಗೂ ವಿಸ್ತರಣೆ. ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಿರತರು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಗೋವಿಂದ ಮಟ್ಟಿ ಸಂಘದ ಕಾರ್ಯದರ್ಶಿ ವಿಜಯರಾಜ್ ಉಪಸ್ಥಿತರಿದ್ದರು.







