ಮಂಗಳೂರು ವಿವಿ: ಪ್ರೊ. ಎಮ್. ರಾಜಶೇಖರ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಕೊಣಾಜೆ, ಮೇ 19: ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದಲ್ಲಿ ಅಧ್ಯಾಪನ ವೃತ್ತಿಯಲ್ಲಿ ಸುಮಾರು 37 ವರ್ಷಗಳ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾಗಿರುವ ಪ್ರೊ. ಎಮ್. ರಾಜಶೇಖರ್ ಅವರಿಗೆ ವಿಭಾಗದ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಬಿ. ಅಬ್ದುಲ್ ರಹಿಮಾನ್ ಅವರು ವಹಿಸಿ ಮಾತನಾಡಿ, ಅಧ್ಯಾಪನ ವೃತ್ತಿ ಜೀವನದಲ್ಲಿ ಸಂತೃಪ್ತಿ ನೀಡುವಂತಹ ಕ್ಷೇತ್ರ. ಜೀವನದುದ್ದಕ್ಕೂ ಹೊಸತವನ್ನು ಕಲಿಯುವುದಕ್ಕೆ ಅವಕಾಶ ಕೊಡುತ್ತದೆ. ಜೀವವಿಜ್ಞಾನ ವಿಭಾಗದಲ್ಲಿ ಡಾ. ರಾಜಶೇಖರ್ ಅವರು ನಿಷ್ಠೆಯಿಂದ ಸಲ್ಲಿಸಿದ ಸೇವೆ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೀವವಿಜ್ಞಾನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಮ್. ಕೃಷ್ಣಮೂರ್ತಿ ಮಾತಾನಾಡಿ, ವಯೋನಿವೃತ್ತಿಯು ಜೀವನದ ಒಂದು ಅವಿಭಾಜ್ಯ ಅಂಗ, ನಿವೃತ್ತಿ ಜೀವನವು ಸ್ವಂತಿಕೆ, ಸೃಜನಶೀಲತೆ ಮತ್ತು ಪ್ರವೃತ್ತಿ ಹಾಗೂ ಕುಟುಂಬದ ಸದಸ್ಯರುಗಳೊಂದಿಗೆ ಸಂತಸದಿಂದ ಬೆರೆಯಲು ಸಮಯ ಹಾಗೂ ಅವಕಾಶನ್ನು ಒದಗಿಸಿಕೊಡುತ್ತದೆ ಎಂದರು.
ವಿಭಾಗದ ಸಹ ದ್ಯೋಗಿಗಳಾದ ಡಾ. ಎಮ್. ಚಂದ್ರ, ಪ್ರೊ. ಕೆ. ರಾಜಶೇಖರ್ ಪಾಟಿಲ್, ಶಿಕ್ಷಕೇತರ ಸಿಬ್ಬಂದಿ ವತಿಯಿಂದ ಎ. ಎಮ್. ಖಾದರ್, ಸಂಶೋಧನಾ ವಿದ್ಯಾರ್ಥಿಗಳ ಪರವಾಗಿ ಡಾ. ಶರತ್ ಚಂದ್ರ ಕೆ., ರವಿತೇಜ ಎಸ್, ದಿವಾಕರ್ ಎಮ್. ಎಸ್, ವಿದ್ಯಾರ್ಥಿಗಳ ಪರವಾಗಿ ಕುಮಾರಿ ಪ್ರಜ್ಞಾ ಉಡುಪ ಇವರು ಪ್ರಾಧ್ಯಾಪಕರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಜೀವವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಆರ್. ಶ್ರೀಧರ್, ವಿಭಾಗದ ಅಧ್ಯಕ್ಷರಾದ ಡಾ. ತಾರವತಿ ಎನ್. ಸಿ. ಉಪಸ್ಥಿತರಿದ್ದರು.
ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಸ್ವಾತಿ ಪ್ರಾರ್ಥನೆ ಮಾಡಿದರು. ಡಾ. ಮೋನಿಕ ಸದಾನಂದ ವಂದನಾರ್ಪಣೆ ಸಲ್ಲಿಸಿದರು.







