ಐಪಿಎಲ್‌ನಲ್ಲಿ ಗಮನ ಸೆಳೆದಿರುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್
ಪುಣೆಯನ್ನು ಫೈನಲ್ ತಲುಪಿಸಿದ ಚೆನ್ನೈನ ಹುಡುಗ

ಚೆನ್ನೈ, ಮೇ 18: ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಗಮನ ಸೆಳೆದಿರುವ ವಾಷಿಂಗ್ಟನ್ ಸುಂದರ್ ಅಮೆರಿಕದವರೇ ಎಂಬ ಕುತೂಹಲ ಎಲ್ಲರಿಗೂ ಸಹಜ. ಆದರೆ ಅಮೆರಿಕದ ನಗರ ವಾಷಿಂಗ್ಟನ್‌ಗೂ ಸುಂದರ್‌ಗೂ ಯಾವುದೇ ಸಂಬಂಧವಿಲ್ಲ.
ಸುಂದರ್ ಅವರ ಹೆಸರಿನೊಂದಿಗೆ ವಾಷಿಂಗ್ಟನ್ ಸೇರಿರುವುದಕ್ಕೆ ಒಂದು ಕಾರಣವಿದೆ. ಸುಂದರ್ ತಂದೆ ಎಂ. ಸುಂದರ್ ತನ್ನ ಮಗನ ಹೆಸರಿನ ಹಿಂದಿನ ರಹಸ್ಯವನ್ನು ಹೊರಗೆಡವಿದ್ದಾರೆ
ವಾಷಿಂಗ್ಟನ್ ಸುಂದರ್ ಅವರ ಮೂಲ ಹೆಸರು ಶ್ರೀನಿವಾಸ್. ನಿವೃತ್ತ ಸೇನಾಧಿಕಾರಿ ಪಿ.ಡಿ.ವಾಷಿಂಗ್ಟನ್ ಅವರು ಎಂ. ಸುಂದರ್ ಅವರ ಸ್ನೇಹಿತರಾಗಿದ್ದರು. ಎಂ. ಸುಂದರ್‌ಗೆ ಪಿ.ಡಿ ವಾಷಿಂಗ್ಟನ್ ಎಲ್ಲ ರೀತಿಯಲ್ಲೂ ನೆರವು ನೀಡಿದವರು. ಈ ಕಾರಣದಿಂದಾಗಿ ಗಾಡ್‌ಫಾದರ್ ವಾಷಿಂಗ್ಟನ್ ಹೆಸರನ್ನು ತನ್ನ ಮಗನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ.
‘‘ ನಾನು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಹುಟ್ಟಿದವ.ನನ್ನ ಊರಿನಿಂದ ಸ್ವಲ್ಪ ದೂರದ ತ್ರಿಪ್ಲಿಕೇನ್ ಎಂಬಲ್ಲಿ ನಿವೃತ್ತ ಸೈನಿಕರೊಬ್ಬರು ವಾಸವಾಗಿದ್ದರು. ಅವರ ಹೆಸರು ಪಿ.ಡಿ ವಾಷಿಂಗ್ಟನ್.ಅವರೊಬ್ಬ ಕ್ರಿಕೆಟ್ ಪ್ರೇಮಿ. ಮರೀನಾ ಬೀಚ್‌ನ ಸ್ಟೇಡಿಯಂನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಬರುತ್ತಿದ್ದರು. ನನ್ನ ಆಟ ಅವರಿಗೆ ಮೆಚ್ಚ್ಚುಗೆಯಾಗಿತ್ತು.ನಾನು ಆಡುವುದನ್ನು ನೋಡಲು ಅವರು ಬರುತ್ತಿದ್ದರು. ಹೀಗೆ ನನಗೆ ಅವರ ಪರಿಚಯ ಆಗಿತ್ತು. ’’ ಎಂದು ಎಂ. ಸುಂದರ್ ಹೇಳುತ್ತಾರೆ.
‘‘ ನಾನೊಬ್ಬ ಬಡವ. ಶಾಲಾ ದಿನಗಳಲ್ಲಿ ಕೈಯಲ್ಲಿ ದುಡ್ಡಿಲ್ಲದೆ ಸಮಸ್ಯೆ ಎದುರಿಸುತ್ತಿದ್ದೆ. ವಾಷಿಂಗ್ಟನ್ ಅವರ ಪರಿಚಯವಾದ ಬಳಿಕ ನನ್ನ ಸಮಸ್ಯೆ ದೂರವಾಗಿತ್ತು. ಅವರು ಶಾಲಾ ಸಮವಸ್ತ್ರವನ್ನು ನನಗೆ ಒದಗಿಸುತ್ತಿದ್ದರು. ಶಾಲಾ ಶುಲ್ಕವನ್ನು ಪಾವತಿಸುತ್ತಿದ್ದರು. ಪಠ್ಯಪುಸ್ತಕವನ್ನು ಖರೀದಿಸಿ ಕೊಟ್ಟು ನನ್ನ ಶಿಕ್ಷಣಕ್ಕೆ ಎಲ್ಲ ರೀತಿಯ ನೆರವು ನೀಡಿದ್ದರು. ಅಷ್ಟೇ ಅಲ್ಲ ಆಡಲು ಗ್ರೌಂಡ್‌ಗೆ ಬೈಸಿಕಲ್‌ನಲ್ಲಿ ನನ್ನನ್ನು ಕರೆದೊಯ್ಯುತ್ತಿದ್ದರು. ಆಡಲು ಬ್ಯಾಟ್ ಖರೀದಿಸಿಕೊಟ್ಟು ನನಗೆ ನೆರವು ನೀಡಿದ್ದರು’’ ಎಂದು ವಾಷಿಂಗ್ಟನ್ ಅವರ ನೆರವನ್ನು ಎಂ.ಸುಂದರ್ ನೆನಪಿಸಿಕೊಳ್ಳುತ್ತಾರೆ.
ಎಂ. ಸುಂದರ್ ರಣಜಿ ಟ್ರೋಫಿಗೆ ತಮಿಳುನಾಡಿನ ಸಂಭಾವ್ಯ ತಂಡಕ್ಕೆ ಆಯ್ಕೆಯಾದಾಗ ವಾಷಿಂಗ್ಟನ್ ಎಲ್ಲರಿಗಿಂತಲೂ ಹೆಚ್ಚು ಖುಷಿಪಟ್ಟಿದ್ದರು. ಹೀಗೆ ಎಂ. ಸುಂದರ್ ಅವರಿಗೆ ವಾಷಿಂಗ್ಟನ್ ಗಾಡ್‌ಫಾದರ್ ಆಗಿದ್ದರು. 1999ರಲ್ಲಿ ವಾಷಿಂಗ್ಟನ್ ನಿಧನರಾದಾದರು. ವಾಷಿಂಗ್ಟನ್ ನಿಧನರಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಎಂ. ಸುಂದರ್‌ಗೆ ಮಗ ಹುಟ್ಟಿದ. ಆತನಿಗೂ ಹಿಂದೂ ಸಂಪ್ರದಾಯದಂತೆ ಶ್ರೀನಿವಾಸ ಎಂಬ ಹೆಸರಿಟ್ಟರೂ, ತನ್ನ ಗಾಡ್‌ಫಾದರ್‌ನ ಹೆಸರನ್ನು ಮಗನ ಹೆಸರಿನೊಂದಿಗೆ ಸೇರಿಸುವುದನ್ನು ಮರೆಯಲಿಲ್ಲ. ಇದರಿಂದಾಗಿ ಶ್ರೀನಿವಾಸ್ ಮುಂದೆ ‘ವಾಷಿಂಗ್ಟನ್’ ಸುಂದರ್ ಆಗಿ ಬದಲಾದರು. ಒಂದು ವೇಳೆ ನನಗೆ ಇನ್ನೊಬ್ಬ ಮಗ ಹುಟ್ಟುತ್ತಿದ್ದರೇ ನಾನು ಅವನಿಗೆ ವಾಷಿಂಗ್ಟನ್ ಜೂನಿಯರ್ ಎಂಬ ಹೆಸರಿಡುತ್ತಿದ್ದೆ ಎಂದು ಎಂ. ಸುಂದರ್ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಸಾಧನೆ: ಚೆನ್ನೈನಲ್ಲಿ 1999, ಅಕ್ಟೋಬರ್ 5ರಂದು ಜನಿಸಿದ ವಾಷಿಂಗ್ಟನ್ ಸುಂದರ್ ಅವರ ವಯಸ್ಸು ಇನ್ನೂ 18ಕ್ಕೆ ತಲುಪಿಲ್ಲ. ಅವರ ವಯಸ್ಸು 17 ವರ್ಷ ಹಾಗೂ 226 ದಿನಗಳು. ಭಾರತ ಅಂಡರ್-19 ಮತ್ತು ಮದ್ರಾಸ್ ರಬ್ಬರ್ ಫ್ರಾಕ್ಟರಿ ತಂಡದ ಪರ ಆಡಿದ್ದ ಸುಂದರ್ ಇದೀಗ ಐಪಿಎಲ್ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಬೌಲರ್ ಆಗಿ ಗಮನ ಸೆಳೆದಿದ್ದಾರೆ. ಆಫ್ ಸ್ಪಿನ್ನರ್ ಆಗಿರುವ ಸುಂದರ್ 2016ರಲ್ಲಿ ಅಂಡರ್-19 ವಿಶ್ವಕಪ್‌ಗೆ ಭಾರತದ ತಂಡದಲ್ಲಿ ಆಡಿದ್ದರು. ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಪ್ರಮುಖ ಬೌಲರ್ ರವಿಚಂದ್ರನ್ ಅಶ್ವಿನ್ ಗಾಯದಿಂದ ಹೊರಗುಳಿದಾಗ ಅವರ ಸ್ಥಾನವನ್ನು ತುಂಬಲು ವಾಷಿಂಗ್ಟನ್ ಸುಂದರ್ ಆಯ್ಕೆಯಾಗಿದ್ದರು.
ಸುಂದರ್ 10ನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ 10 ಪಂದ್ಯಗಳಲ್ಲಿ ಆಡಿದ್ದಾರೆ. 26 ಓವರ್‌ಗಳಲ್ಲಿ 172ಕ್ಕೆ 8 ವಿಕೆಟ್‌ಗಳನ್ನು ಉಡಾಯಿಸಿದ್ದಾರೆ. ಮುಂಬೈ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮ(1). ಅಂಬಟಿ ರಾಯುಡು (0) ಮತ್ತು ಪೊಲಾರ್ಡ್(7) ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಪುಣೆ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದರು. 4 ಓವರ್‌ಗಳಲ್ಲಿ 16ಕ್ಕೆ 3 ವಿಕೆಟ್ ಉಡಾಯಿಸಿ ಪುಣೆಯನ್ನು ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಂದರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ರಣಜಿಗೂ ಸುಂದರ್ ಸೈ: ವಾಷಿಂಗ್ಟನ್ ಸುಂದರ್ 2016, ಅ.6ರಿಂದ 8ರ ತನಕ ರೋಹ್ಟಕ್‌ನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ತಮಿಳುನಾಡು ತಂಡದ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದ್ದರು. ಅಭಿನವ್ ಮುಕುಂದ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಎಡಗೈ ದಾಂಡಿಗ ಸುಂದರ್ ಮೊದಲ ಇನಿಂಗ್ಸ್‌ನಲ್ಲಿ 2 ರನ್ ಗಳಿಸಿ ಔಟಾಗಿದ್ದರು. ಆದರೆ ಎರಡನೆ ಇನಿಂಗ್ಸ್‌ನಲ್ಲಿ 40 ರನ್ ಗಳಿಸಿದ್ದರು. ಮೊದಲ ವಿಕೆಟ್‌ಗೆ ಮುಕುಂದ್ ಜೊತೆ 107 ರನ್‌ಗಳ ಜೊತೆಯಾಟ ನೀಡಿದ್ದರು.5 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಸುಂದರ್ 87 ರನ್ ಗಳಿಸಿದ್ದಾರೆ. 7 ವಿಕೆಟ್ ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶನ 40ರನ್ ಹಾಗೂ 23ಕ್ಕೆ 3 ವಿಕೆಟ್
,,,,,,,,,







