ಗೋವಾ ರೆಸ್ಟೊರೆಂಟ್‌ನ ವೇಯ್ಟರ್ ಈಗ ಮುಂಬೈ ಇಂಡಿಯನ್ಸ್ ತಂಡದ ಸದಸ್ಯ!

ಮುಂಬೈ, ಮೇ 19: ಮುಂಬೈ ಇಂಡಿಯನ್ಸ್ ತಂಡ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರನ್ನು ಒಳಗೊಂಡಿದೆ. ರೋಹಿತ್ ಶರ್ಮ ನೇತೃತ್ವದ ಈ ತಂಡ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಶ್ರೀಮಂತ ಟ್ವೆಂಟಿ-20 ಟೂರ್ನಿ ಐಪಿಎಲ್‌ನಲ್ಲಿ ಮುಂಬೈ ತಂಡ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿದೆ.
ಮುಂಬೈ ತಂಡದಲ್ಲಿ ಘಟಾನುಘಟಿ ಆಟಗಾರರಿರುವ ಕಾರಣ ಹೊಸಬರು ಬೆಳಕಿಗೆ ಬರುತ್ತಲ್ಲೇ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಕುಲ್ವಂತ್ ಖೇಜ್ರೊಲಿಯಾ.
ಕುಲ್ವಂತ್ ಕೇವಲ ಒಂದು ವರ್ಷದ ಹಿಂದೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಮೊದಲು ಗೋವಾದ ರೆಸ್ಟೋರೆಂಟ್‌ನಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಮುಖಾಂತರ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡ ಕುಲ್ವಂತ್ ದಿಲ್ಲಿಗೆ ತೆರಳಿ ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದರು.
ದಿಲ್ಲಿಗೆ ಹೋಗುವ ವಿಷಯವನ್ನು ತಂದೆ-ತಾಯಿಯ ತಿಳಿಸದ ಕುಲ್ವಂತ್ ಅವರು ಗೌತಮ್ ಗಂಭೀರ್, ನಿತೀಶ್ ರಾಣಾ ಹಾಗೂ ಉನ್ಮುಕ್ತ್ ಚಂದ್‌ರಂತಹ ಆಟಗಾರನ್ನು ರೂಪುಗೊಳಿಸಿದ್ದ ಎಲ್. ಬಿ. ಶಾಸ್ತ್ರಿ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು. ಎಲ್‌ಬಿ ಶಾಸ್ತ್ರಿ ಕ್ಲಬ್‌ನಲ್ಲಿ ಸಂಜಯ್ ಭಾರದ್ವಾಜ್ ಅವರು ಕುಲ್ವಂತ್‌ಗೆ ಗುರುಗಳಾಗಿ ದೊರೆತರು. ಕುಲ್ವಂತ್‌ಗೆ ಇತರ ಕ್ರಿಕೆಟಿಗರೊಂದಿಗೆ ಹಾಸ್ಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಸಂಜಯ್ ಅವರು ಕುಲ್ವಂತ್‌ರನ್ನು ಓರ್ವ ಉತ್ತಮ ಎಡಗೈ ವೇಗಿಯಾಗಿ ತಯಾರಿಗೊಳಿಸಿದರು.
25ರ ಹರೆಯದ ಎಡಗೈ ವೇಗದ ಬೌಲರ್ ಕುಲ್ವಂತ್‌ರನ್ನು ಈ ವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂಲ ಬೆಲೆ 10 ಲಕ್ಷ ರೂ.ಗೆ ಖರೀದಿಸಿತ್ತು. 2017ರ ವಿಜಯ್ ಹಝಾರೆ ಟ್ರೋಫಿಯಲ್ಲಿ ದಿಲ್ಲಿ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿರುವ ಕುಲ್ವಂತ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರಿರುವ ಕಾರಣ ಈ ವಷರ್ದ ಐಪಿಎಲ್‌ನಲ್ಲಿ ಹೊಸ ಮುಖ ಕುಲ್ವಂತ್‌ಗೆ ಮುಂಬೈ ಪರ ಆಡುವ ಅವಕಾಶ ಲಭಿಸಿಲ್ಲ. ಮುಂಬೈ ತಂಡದ ಸಪೋರ್ಟ್ ಸ್ಟಾಫ್‌ನಲ್ಲಿ ಮಹೇಲ ಜಯವರ್ಧನೆ, ಸಚಿನ್ ತೆಂಡುಲ್ಕರ್ ಅವರಂತಹ ದಿಗ್ಗಜರಿದ್ದಾರೆ.
ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆದಿದ್ದ ಮುಂಬೈ ತಂಡ ಮೇ 21 ರಂದು ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಪಡೆಯಬೇಕಾದರೆ ಎರಡನೆ ಕ್ವಾಲಿಫೈಯರ್‌ನಲ್ಲಿ ಕೆಕೆಆರ್ ತಂಡವನ್ನು ಸೋಲಿಸಬೇಕಾಗಿದೆ.







