ಮಹಾರಾಷ್ಟ್ರದಲ್ಲಿ ಬಯಲು ಶೌಚ ತಡೆಗೆ ‘ಗುಡ್ ಮಾರ್ನಿಂಗ್’ ದಳಗಳ ರಚನೆ

ಮುಂಬೈ,ಮೇ 20: ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳು ಮತ್ತು ಗ್ರಾಮಗಳಲ್ಲಿ ಬಯಲು ಶೌಚ ಮಾಡುವವರ ಮೇಲೆ ನಿಗಾಯಿರಿಸಲು ಮತ್ತು ಅದನ್ನು ನಿಲ್ಲಿಸಲು ‘ಗುಡ್ ಮಾರ್ನಿಂಗ್’ ದಳಗಳನ್ನು ರಚಿಸಲು ಮಹಾರಾಷ್ಟ್ರ ಸರಕಾರವು ನಿರ್ಧರಿಸಿದೆ.
ಸ್ಥಳೀಯ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮತ್ತು ಎನ್‌ಜಿಒಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಈ ದಳಗಳು ಒಳಗೊಂಡಿ ರುತ್ತವೆ.
ಶೌಚಾಲಯಗಳು ಇಲ್ಲದಿರುವ ಮತ್ತು ಇದ್ದರೂ ಪ್ರವೇಶ ನಿರಾಕರಿಸಲ್ಪಡುತ್ತಿರುವ ಪ್ರದೇಶಗಳು ಮತ್ತು ಪ್ರಕರಣಗಳ ಬಗ್ಗೆ ಪೌರ ಸಂಸ್ಥೆಗಳಿಗೆ ವರದಿ ಮಾಡಲೂ ಈ ದಳಗಳಿಗೆ ಅಧಿಕಾರ ನೀಡಲಾಗುತ್ತದೆ.
ಶೌಚಾಲಯ ನಿರ್ಮಾಣ ಕಾಮಗಾರಿಗಳು ಬಾಕಿಯಿದ್ದರೆ ಅವುಗಳನ್ನು ಪೌರ ಸಂಸ್ಥೆಗಳೊಂದಿಗೆ ಕೈಗೆತ್ತಿಕೊಳ್ಳಲು ಅಧಿಕಾರ ಹೊಂದಿರುವ ಈ ದಳಗಳು ಕಾಮಗಾರಿಗಳನ್ನು ತ್ವರಿತಗೊಳಿಸಲು ನೆರವಾಗಲಿವೆ. ಬಯಲು ಶೌಚವನ್ನು ನಿಲ್ಲಿಸುವುದು ಮತ್ತು ಈ ಪದ್ಧತಿಯನ್ನು ಆಚರಿಸುತ್ತಿರುವ ಜನರ ಮನೋಸ್ಥಿತಿಯನ್ನು ಬದಲಿಸುವ ನಿಟ್ಟಿನಲ್ಲಿ ಈ ‘ಗುಡ್ ಮಾರ್ನಿಂಗ್’ ದಳಗಳು ಕಾರ್ಯ ನಿರ್ವಹಿಸಲಿವೆ.
ಜನರು ಶೌಚಾಲಯವಿದ್ದರೂ ಬಯಲು ಶೌಚದಲ್ಲಿ ತೊಡಗಿರುವುದು ಕಂಡುಬಂದರೆ ಅಂಥವರಿಗೆ ಈ ದಳಗಳು ಭಾರೀ ದಂಡ ವಿಧಿಸಲಿವೆ ಎಂದೂ ಸರಕಾರದ ಸುತ್ತೋಲೆಯು ತಿಳಿಸಿದೆ.







