ಮಿಸ್ಡ್ ಕಾಲ್ ನಲ್ಲಿ ಬೆಳೆದ ಗೆಳೆತನ ಮಹಿಳೆಯ ಕೊಲೆಯಲ್ಲಿ ಅಂತ್ಯ

ಹರಿಪ್ಪಾಡ್(ಕೇರಳ), ಮೇ 20: ಮಿಸ್ಡ್ ಕಾಲ್‌ನಲ್ಲಿ ಪರಿಚಿತಳಾದ ಮಹಿಳೆಯ ಕೊರಳಿಗೆ ಚೂಡಿದಾರದ ಶಾಲು ಬಿಗಿದು ಕೊಲೆಮಾಡಿದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ಭರಣಿಕ್ಕಾವ್‌ಪುತ್ತನ್ ಪುರದ ಪುಷ್ಪಕುಮಾರಿ(43) ಎಂದು ಗುರುತಿಸಲಾಗಿದೆ. ಹರಿಪ್ಪಾಡ್ ಪೊಂದಪ್ಪಳ್ಳಿಯ ಶಾಂತಭವನಂ ವೇಣು (39) ಎಂಬಾತನನ್ನು ಪೊಲೀಸರು ಕೊಲೆ ಕೃತ್ಯ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ನಡೆದಿದ್ದ ಬಾಡಿಗೆ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.
ಹರಿಪ್ಪಾಡ್‌ನ ಮಾಧವ ಜಂಕ್ಷನ್‌ನಲ್ಲಿ ಗುರುವಾರ ಘಟನೆ ನಡೆದಿತ್ತು. ಪ್ರಿಯತಮೆಯನ್ನು ಕೊಂದು ರಾತ್ರಿಯ ವೇಳೆಯಲ್ಲಿ ಗೆಳೆಯನ ನೆರವಿನಿಂದ ಮೃತದೇಹವನ್ನು ಶೌಚಾಲಯದಲ್ಲಿ ಹೂತುಹಾಕಲು ಯತ್ನಿಸಿದ್ದಾನೆ. ಈವಿಷಯವನ್ನು ಗೆಳೆಯನೆ ಪೊಲೀಸರಿಗೆ ತಿಳಿಸಿದ್ದರಿಂದ ವೇಣುವನ್ನು ಅವನು ವಾಸವಿದ್ದ ಬಾಡಿಗೆ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.
ಮೃತ ನತದೃಷ್ಟ ಮಹಿಳೆ, ಪುಷ್ಪಕುಮಾರಿಯ ಪತಿ ಐದುವರ್ಷಗಳ ಹಿಂದೆ ನಿಧನರಾಗಿದ್ದರು. ಆನಂತರ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದರು. ಆಗಾಗ ಪುಷ್ಪಕುಮಾರಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಬೇರೆಡೆ ತಂಗುತ್ತಿದ್ದರು. ಮನೆಯಲ್ಲಿ ಈ ರೀತಿ ಹೇಳಿ ಎರಡು ದಿವಸದ ಹಿಂದೆಯಷ್ಟೇ ವೇಣು ಬಾಡಿಗೆಗೆ ಪಡೆದಿದ್ದ ಮನೆಗೆ ಪುಷ್ಪಕುಮಾರಿ ಬಂದಿದ್ದರು.
ಗುರುವಾರ ರಾತ್ರಿ ಪುಷ್ಪಕುಮಾರಿಗೆ ಒಂದು ಫೋನ್‌ಕರೆ ಬಂದಿತ್ತು. ನಂತರ ಅವರಿಬ್ಬ ರ ನಡುವೆ ಜಗಳವಾಗಿದೆ. ಮರುದಿವಸ ವೇಣು ಫೋನ್ ಕಾಲ್‌ನ ಕುರಿತು ಪುಷ್ಪಕುಮಾರಿಯನ್ನು ಪ್ರಶ್ನಿಸಿದ್ದು, ಪುಷ್ಪಕುಮಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೇಣುವನ್ನು ಬೆದರಿಸಿದ್ದರು. ಇದರಿಂದ ಕೋಪಗೊಂಡ ವೇಣು, ಚೂಡಿದಾರದ ಶಾಲಿನಿಂದ ಪುಷ್ಷಕುಮಾರಿಯ ಕೊರಳು ಬಿಗಿದು ಕೊಲೆಮಾಡಿದ್ದಾನೆ. ಪುಷ್ಪಕುಮಾರಿಯನ್ನು ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿತ್ತು ಎಂದು ಪೊಲೀಸರಿಗೆ ಆರೋಪಿ ತಿಳಿಸಿದ್ದಾನೆ.







