ರಸ್ತೆ ಕಾಮಗಾರಿಗಳಿಗೆ 16.30 ಕೋಟಿ ರೂ. ಅನುದಾನ: ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು, ಮೇ 20: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳ ನಿರ್ಮಾಣ, ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿಗಾಗಿ ವಿವಿಧ ಯೋಜನೆಯಡಿ ಒಟ್ಟು 16.30 ಕೋಟಿ ರೂ. ಅನುದಾನ ಮಂಜೂರುಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ.
ಅವರು ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇದಲ್ಲದೆ ಪ್ರತ್ಯೇಕ 20 ಕೋಟಿ ರೂ. ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಬರೆದುಕೊಂಡಿರುವುದಾಗಿ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಅಪಘಾತ ವಲಯ ಎಂದು ಗುರುತಿಸಿಕೊಂಡಿರುವ ಹಲವು ಸ್ಥಳಗಳನ್ನು ಪಟ್ಟಿ ತಯಾರಿಸಲಾಗಿದ್ದು, ಈ ಪೈಕಿ ಅತ್ಯಂತ ಹೆಚ್ಚು ಅಪಾಯಕಾರಿಯಾಗಿರುವ ಸ್ಥಳಗಳ ತಿರುವು ಸರಿ ಮಾಡುವ ಕಾಮಗಾರಿಗೆ ಹಣ ಮಂಜೂರಾಗಿದೆ. ಕುಂಜೂರು ಪಂಜದ ಕಾಮಗಾರಿಗೆ 4.80 ಕೋಟಿ ರೂ., ಸಂಟ್ಯಾರ್ ತಿರುವು ಕಾಮಗಾರಿಗೆ 60 ಲಕ್ಷ ರೂ., ನೆಟ್ಟಾರು- ಅಮ್ಚಿನಡ್ಕ ರಸ್ತೆಯ ಅಮಳದಲ್ಲಿ ರಸ್ತೆ ಕಾಮಗಾರಿಗೆ 1 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿಶೇಷ ಅನುದಾನದಲ್ಲಿ 4 ಕೋಟಿ ರೂ. ಮಂಜೂರಾಗಿದೆ. ಈ ಅನುದಾನದಲ್ಲಿ ಕ್ಷೇತ್ರದಾದ್ಯಂತ ತಲಾ 5 ಲಕ್ಷ ರೂ. ನಂತೆ 80 ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡಿಸಲಾಗುವುದು.
ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಲ್ಲಿ 2.40 ಕೋಟಿ ರೂ., ಗಿರಿಜನ ಉಪ ಯೋಜನೆಯ ಅಡಿಯಲ್ಲಿ 2 ಕೋಟಿ ರೂ. ಮಂಜೂರಾಗಿದ್ದು, ಈ ಅನುದಾನ ಕೂಡ ರಸ್ತೆ ಕಾಮಗಾರಿಗಾಗಿ ವಿನಿಯೋಗವಾಗಲಿದೆ. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಲ್ಲಿ 1 ಕೋಟಿ ರೂ. ಮಂಜೂರಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ: 13 ರಸ್ತೆಗಳ ಅಭಿವೃದ್ಧಿ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಅಡಿಯಲ್ಲಿ ಕ್ಷೇತ್ರದಲ್ಲಿ ಒಟ್ಟು 13 ಕಡೆ ಕಾಮಗಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಈ ಪೈಕಿ ಸುಳ್ಯಪದವು - ಪದಡ್ಕ - ಮೈಂದನಡ್ಕ ರಸ್ತೆ, ಬಲ್ನಾಡ್ - ಸಾಜ ರಸ್ತೆ, ಅರ್ಕ - ಹನಿಯೂರು ರಸ್ತೆ (ಕೊಡಿಪ್ಪಾಡಿ), ಅಳಕೆ ಮಜಲು- ವಡ್ಯರ್ಪೆ ರಸ್ತೆ (ಇಡ್ಕಿದು), ಪಾಟ್ರಕೋಟಿ - ಕೆದಿಲ ರಸ್ತೆ, ವಿನಾಯಕ ನಗರ- ಮಠಂತಬೆಟ್ಟು ದೊರ್ಮೆ ರಸ್ತೆ (ಕೋಡಿಂಬಾಡಿ), ಬೊಳಂತಿಲ - ದರ್ಬೆ ರಸ್ತೆ (34 ನೆಕ್ಕಿಲಾಡಿ), ಈ ರಸ್ತೆ ಕಾಮಗಾರಿಗಳಿಗೆ ಮೇ 26ರಂದು ಚಾಲನೆ ನಡೆಯಲಿದೆ.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವ ತಲೆಕ್ಕಿಮಾರು - ಮುಂಡಮೂಲೆ ರಸ್ತೆ (ಮಾಣಿಲ), ನೀರ್ಕಜೆ - ಕಟ್ಟೆ ರಸ್ತೆ (ಕೇಪು), ಗರಡಿಬೈಲ್ - ಅಡ್ಕ ರಸ್ತೆ (ಪುಣಚ), ಪಾಪೆಮಜಲು - ಬಪ್ಪಪುಂಡೇಲು ರಸ್ತೆ (ಅರಿಯಡ್ಕ), ಬನ್ನೂರು ಕಜೆ - ಕುಂಟ್ಯಾನ ರಸ್ತೆ (ಬನ್ನೂರು), ದಾಸರಮೂಲೆ - ಅಡೆಕಲ್ಲು ರಸ್ತೆ (ಹಿರೇಬಂಡಾಡಿ) ಕಾಮಗಾರಿಗೆ ಮೇ 27ರಂದು ಗುದ್ದಲಿ ಪೂಜೆ ನಡೆಯಲಿದೆ ಎಂದು ಅವರು ತಿಳಿಸಿದರು.