ಜೂನ್ ತಿಂಗಳೊಳಗೆ ಶಾಲಾ ಸಬಲೀಕರಣದ ವರದಿ: ಎಸ್.ಜಿ.ಸಿದ್ದರಾಮಯ್ಯ

ಶಿವಮೊಗ್ಗ, ಮೇ 20: ಸರ್ಕಾರಿ ಶಾಲೆಗಳ ಸಬಲೀಕರಣ ಸಂಬಂಧ ರಚಿಸಲಾಗಿರುವ ಶಾಲಾ ಸಬಲೀಕರಣ ಸಮಿತಿ ಈಗಾಗಲೇ 52 ಗುಣಾತ್ಮಕ ಅಂಶಗಳನ್ನು ಗುರುತಿಸಿದ್ದು ಜೂನ್ ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಾಗತೀಕರಣದ ಒಡೆತದಲ್ಲಿ ಮತ್ತೆ ಭಾಷೆಯ ಮೇಲೆ ಅನ್ಯಭಾಷೆಯ ಪರಿಣಾಮ ಬೀರಿದೆ. ಈ ಹಂತದಲ್ಲಿ ಕೆಲವು ಸರ್ಕಾರಿ ಶಾಲೆಗಳು ವಿವಿಧ ಕಾರಣಗಳಿಂದ ಮುಚ್ಚಲ್ಪಟ್ಟವು. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವ ಸಂಬಂಧ ತಮ್ಮ ನೇತೃತ್ವದಲ್ಲಿ ವಿವಿಧ ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರನ್ನೊಳಗೊಂಡ ಶಾಲಾ ಸಬಲೀಕರಣ ಸಮಿತಿ ರಾಜ್ಯದ್ಯಂತ ವಿವಿಧ ಹಂತದಲ್ಲಿ ಅಧ್ಯಯನ ನಡೆಸಿದೆ. ಈ ಸಂಬಂಧ ಶಾಲಾ ಸಬಲೀಕರಣಕ್ಕೆ 52 ಗುಣಾತ್ಮಕ ಅಂಶಗಳನ್ನು ಗುರುತಿಸಿದ್ದು ಜೂನ್ ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಎಲ್ಲ ಅನುಷ್ಠಾನಾಧಿಕಾರಿಗಳು ಕನ್ನಡ ಅನುಷ್ಠಾನ ಕುರಿತು ಪ್ರತಿ ತಿಂಗಳು ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಹಾಗೂ ಮಹಾನಗರ ಪಾಲಿಕೆಯಿಂದ ಎಲ್ಲ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳನ್ನು ಕನ್ನಡದಲ್ಲಿಯೂ ಇರುವಂತೆ ಕ್ರಮ ವಹಿಸಲು ಹಾಗೂ ಕೈಗಾರಿಕೆಗಳಲ್ಲಿ ಮಹಿಷಿ ವರದಿ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ, ಆಪ್ತ ಕಾರ್ಯದರ್ಶಿ ಡಾ.ಕೆ.ಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ ಮತ್ತಿತರರು ಉಪಸ್ಥಿತರಿದ್ದರು.





