ಜಮೀಯ್ಯತುಲ್ ಫಲಾಹ್‌ನಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು, ಮೇ 20: ಎಸೆಸೆಲ್ಸಿಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಅಗ್ರಸ್ಥಾನ ತಂದುಕೊಟ್ಟ ಐವರು ವಿದ್ಯಾರ್ಥಿಗಳು ಹಾಗು ಕೊಣಾಜೆಯ ಗ್ರೀನ್ ವ್ಯೂ ಪ.ಪೂ. ಕಾಲೇಜಿನ ಪ್ರಥಮ ಬ್ಯಾಚ್‌ನ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ವತಿಯಿಂದ ಶನಿವಾರ ನಗರದ ಕಂಕನಾಡಿಯಲ್ಲಿರುವ ಜೆ.ಎಫ್.ಸಮುದಾಯ ಭವನದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ ಸಾಧಕರನ್ನು ಗುರುತಿಸಿ ಗೌರವಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯವಾಗಿದೆ. ಇಂದು ಸನ್ಮಾನಗೊಂಡ ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಅಹಂಕಾರ ಭಾವನೆ ಬೆಳೆಸದೆ ಭವಿಷ್ಯದ ಪ್ರಜೆಗಳಾಗಿ ಬಾಳಬೇಕು. ವಿದ್ಯಾರ್ಥಿಗಳಿಗೆ ಅಂಕ ಪಡೆಯುವುದು ಮುಖ್ಯವಲ್ಲ. ಹಣ, ಸಂಪತ್ತು ಗಳಿಕೆಯೂ ಮುಖ್ಯವಲ್ಲ.ಜವಾಬ್ದಾರಿ ಮುಖ್ಯವಾಗಿದೆ ಎಂದರು.
ಇಂದಿನ ಹೆಚ್ಚಿನ ಅಪರಾಧಗಳು ವಿದ್ಯಾವಂತರಿಂದಲೇ ಘಟಿಸುತ್ತಿರುವುದು. ಇದನ್ನು ಗಂಭೀರವಾಗಿ ಯೋಚಿಸಬೇಕಿದೆ. ವೌಲ್ಯಯುತ ಶಿಕ್ಷಣ ನೀಡದಿರುವುದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಶಿಕ್ಷಕ ವರ್ಗ ಮತ್ತು ಹೆತ್ತವರು ತಮ್ಮ ಹೊಣೆಗಾರಿಕೆ ಅರಿತುಕೊಂಡು ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಬೇಕಿದೆ. ವಿದ್ಯಾರ್ಥಿಗಳು ವಿದ್ಯಾವಂತರಾದರೆ ಸಾಲದು, ಹೃದಯವಂತಿಕೆ ಬೆಳೆಸಿಕೊಳ್ಳಬೇಕು ಎಂದು ಡಾ.ಎಂ.ಆರ್.ರವಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್‌ನ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಝಮೀರ್ ಅಂಬರ್, ಅಬ್ದುಲ್ ವಹ್ಹಾಬ್, ಶಿಕ್ಷಣ ಇಲಾಖೆಯ ಗುರುನಾಥ ಬಾಗೇವಾಡಿ ಉಪಸ್ಥಿತರಿದ್ದರು.
ಸ್ಥಾಪಕ ಸದಸ್ಯ ಅನ್ವರ್ ಬಜ್ಪೆ ಕಿರಾಅತ್ ಪಠಿಸಿದರು. ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರೂಪಿಸಿರು. ಪ್ರಧಾನ ಕಾರ್ಯದರ್ಶಿ ಸೈಯದ್ ಝುಬೇರ್ ಶಾ ವಂದಿಸಿದರು.
►ಎಸೆಸೆಲ್ಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಾದ ಪೂರ್ಣಾನಂದ, ಮೈನಾ ಅಂಜುಮ್ ಕೆ.ಕೆ., ಶೈಮಾ, ವಝ್ರಾ ಖೈರುನ್ನಿಸಾ ಹಾಗು ವಿಶಿಷ್ಟ ಚೇತನ ಮುಹಮ್ಮದ್ ತಲ್‌ಹತ್‌ರನ್ನು ಸನ್ಮಾನಿಸಲಾಯಿತು.
►ಗ್ರೀನ್ ವ್ಯೂವ್ ಕಾಲೇಜಿನ ರಿಝ್ವಾನಾ, ಶಂಶೀರಾ, ರಫೀದಾ, ರೈಹಾನಾರನ್ನು ಗೌರವಿಸಲಾತು.
►ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.







