ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾಗೆ ಜೂ.2ರವರೆಗೆ ನ್ಯಾಯಾಂಗ ಬಂಧನ
ಜಂತಕಲ್ ಮೈನಿಂಗ್ ಪ್ರಕರಣ
ಬೆಂಗಳೂರು, ಮೇ 20: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರ ಜಾಮೀನು ಅರ್ಜಿಯನ್ನು ಮೇ 24ರವರೆಗೆ ಮುಂದೂಡಿರುವ ಸಿಟಿ ಸಿವಿಲ್ ಕೋರ್ಟ್. ಜೂನ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಈ ಸಂಬಂಧ ಗಂಗಾರಾಮ್ ಬಡೇರಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ವೈ.ವನಮಾಲಾ ಆನಂದ್‌ರಾವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಎಸ್‌ಐಟಿ ಪರ ವಾದಿಸಿದ ವಕೀಲರು, ಹೆಚ್ಚಿನ ವಿಚಾರಣೆಗಾಗಿ ಗಂಗಾರಾಮ್ ಬಡೇರಿಯಾ ಅವರನ್ನು ಇನ್ನಷ್ಟು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ಪರ ವಾದಿಸಿದ ವಕೀಲರು, ಎಸ್‌ಐಟಿ ಅಧಿಕಾರಿಗಳು ಬಡೇರಿಯಾ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿರುವ ಅವಧಿ ಮೇ 20ಕ್ಕೆ ಮುಗಿದಿದೆ. ಹೀಗಾಗಿ, ಅವರಿಗೆ ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಬಡೇರಿಯಾ ಅವರ ಜಾಮೀನು ಅರ್ಜಿಯನ್ನು ಮೇ 24ರವರೆಗೆ ಮುಂದೂಡಿ ಆದೇಶ ಹೊರಡಿಸಿದೆ. ಜಂತಕಲ್ ಮೈನಿಂಗ್ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ಸೋಮವಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಇತ್ತೀಚಿಗೆ ಸುಪ್ರೀಂಕೋರ್ಟ್, ಜಂತಕಲ್ ಮೈನಿಂಗ್ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಹೆಸರಿಸಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿತ್ತು.
ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಗಂಗಾರಾಮ್ ಬಡೇರಿಯಾ ಅವರ ಹೆಸರಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ಈ ಐಎಎಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ ಹಾಗೂ ಧರಂಸಿಂಗ್ ಅವರ ಹೆಸರು ಕೂಡ ಇದೆ. ಆದರೆ, ಎಸ್.ಎಂ.ಕೃಷ್ಣ ಅವರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ ಎಂದು ಮೂಲಗಳು ತಿಳಿಸಿವೆ.







