ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮ: ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್
ಉಡುಪಿ, ಮೇ 20: ಕಾಂಗ್ರೆಸ್ ಪಕ್ಷದ ಪ್ರಮುಖ ಅಂಗವಾಗಿರುವ ಯುವ ಕಾಂಗ್ರೆಸ್‌ನ ಜಿಲ್ಲಾ ನೂತನ ಸಮಿತಿಯು ರಚನೆಯಾಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಲಾಗುವುದು ಎಂದು ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ನೂತನ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ.
ಉಡುಪಿಯ ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಮಿತಿಗೆ ಒಟ್ಟು 12,000 ಸದಸ್ಯತ್ವ ನೋಂದಾಣಿಯಾಗಿದ್ದು, ಇದರಲ್ಲಿ 2,500 ಮಂದಿ ಸಕ್ರಿಯ ಸದಸ್ಯ ರಾಗಿದ್ದಾರೆ. ಈ ಬಾರಿ ನಡೆದ ಚುನಾವಣೆಯಲ್ಲಿ 1,200 ಮಂದಿ ಮತ ಚಲಾ ವಣೆ ಮಾಡಿದ್ದಾರೆ. ಈ ಮೂಲಕ 17 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರತಿ ಬೂತ್ ಮಟ್ಟದಲ್ಲಿ 100 ಯುವ ಜನತೆಯನ್ನು ಕಾಂಗ್ರೆಸ್‌ಗೆ ಸೇರಿಸಿ, ಹೋಬಳಿ ಮಟ್ಟದಲ್ಲಿ 5 ಮಂದಿಯನ್ನು ಗುರುತಿಸಿ ವ್ಯಕ್ತಿತ್ವ ವಿಕಸನ ಸಹಿತ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುವುದು. ಪದಾಧಿಕಾರಿಗಳಲ್ಲಿ ಎಲ್ಲ ಜಾತಿ, ಧರ್ಮದವರಿಗೆ ಸಮಾನ ಅವಕಾಶವನ್ನು ನೀಡಲಾಗಿದೆ. ಮುಂದಿನ 15ದಿನ ಗಳಲ್ಲಿ ಎಲ್ಲ ಸಮಿತಿಗಳನ್ನು ರಚಿಸಿ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲಾಗುವುದು ಎಂದು ಅವರು ಹೇಳಿದರು.
ಜನಸೇವೆಯೇ ದೇಶ ಸೇವೆ ಎಂಬ ಧ್ಯೇಯದೊಂದಿಗೆ ಯುವ ಸಮುದಾಯ ವನ್ನು ಸಂಘಟಿಸಲಾಗುವುದು. ಇತರ ಪಕ್ಷದವರಂತೆ ಯುವಕರನ್ನು ತಪ್ಪು ದಾರಿಗೆ ಕೊಂಡೊಯ್ಯದೆ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಉಳಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಸದ್ಯದಲ್ಲೇ ನೂತನ ಪದಾಧಿಕಾರಿಗಳ ಪದಗ್ರಹಣ ‘ಯುವ ಚೇತನ’ ಕಾರ್ಯಕ್ರಮವನ್ನು ಉಡುಪಿಯಲ್ಲಿ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದ್ದು, ಇದರಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ವಿಘ್ನೇಶ್ ಕಿಣಿ, ಬೈಜು ದೈವಸ್ಯ, ಪ್ರಶಾಂತ್ ಪೂಜಾರಿ, ರಮೇಶ್ ಶೆಟ್ಟಿ, ಶರೀಫ್, ಬೈಂದೂರು ಕ್ಷೇತ್ರ ಅಧ್ಯಕ್ಷ ಶೇಖರ್ ಪೂಜಾರಿ, ಕುಂದಾಪುರ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ, ಕಾಪು ಅಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಕಳ ಅಧ್ಯಕ್ಷ ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು.







