ಪ್ರಕೃತಿಯ ರಕ್ಷಣೆಯೇ ನಿಜವಾದ ದೇಶಪ್ರೇಮ: ಪೇಜಾವರ ಶ್ರೀ
ಉಡುಪಿ, ಮೇ 20: ದೇಶ ಎಂಬುದು ಕೇವಲ ಭೂಮಿ ಅಲ್ಲ. ಜನರು, ಪ್ರಕೃತಿ, ಪ್ರಾಣಿಪಕ್ಷಿ ಸಂಕುಲ ಇವೆಲ್ಲವೂ ದೇಶ ಆಗಿದೆ. ಇವುಗಳನ್ನು ರಕ್ಷಣೆ ಮಾಡುವುದೇ ನಿಜವಾದ ದೇಶಪ್ರೇಮ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಕಡೆಕಾರು ಜಯಪ್ರಕಾಶ್ ಶೆಟ್ಟಿ ನೇತೃತ್ವದ ‘ಬೊಲೊ ವಂದೇ ಮಾತರಂ’ ಸಂಸ್ಥೆಯನ್ನು ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಹದ ಮೇಲಿನ ಅತಿಯಾದ ಪ್ರೀತಿಯನ್ನು ದೇಶದ ಕುರಿತು ಚಿಂತನೆ ಮಾಡಬೇಕು. ದೇಶದಲ್ಲಿ ಯಾವುದೇ ತರದ ಘರ್ಷಣೆ, ಹಿಂಸೆ ನಡೆಯಬಾರದು. ಶಾಂತಿ ನೆಲೆಸಬೇಕು. ಸಜ್ಜನರಿಗೆ ಯಾವುದೇ ಭಯ ಇರಬಾರದು. ಅವರು ನಿರ್ಭಯವಾಗಿ ಸಂಚಾರ ಮಾಡಬಹುದಾದ ವಾತಾವರಣ ನಿರ್ಮಾಣ ಆಗಬೇಕು. ದೇಶದ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ಪ್ರೇಮ, ಅಭಿಮಾನ ಇರಬೇಕು. ಇದು ನಮ್ಮಲ್ಲಿ ಜಾಗೃತವಾಗಬೇಕು ಎಂದರು.
‘ಕಡೆಕಾರಿನಲ್ಲಿ ಹುಟ್ಟಿ ಪ್ರಸ್ತುತ ಮುಂಬೈಯ ನಿವಾಸಿಯಾಗಿರುವ ನಾನು ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವು ಸಮಯಗಳ ಹಿಂದೆ ಉಡುಪಿಯಿಂದ ಮುಂಬೈಯವರೆಗೆ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆ ಮಾಡಿದ್ದೆ. ಬಳಿಕ ಆ ರಾಷ್ಟ್ರಧ್ವಜವನ್ನು ದೇಶಸೇವೆ ಮಾಡುವುದರಲ್ಲಿ ಮುಂಚೂಣಿ ಯಲ್ಲಿರುವ ಮಡಿಕೇರಿಯ ಜನತೆಗೆ ಅರ್ಪಿಸಿದ್ದೆ. ಇದೀಗ ಬೊಲೊ ವಂದೇ ಮಾತರಂ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಪ್ರತಿಯೊಂದು ಮನೆಮನೆಗಳಿಗೂ ದೇಶದ ಹಿರಿಮೆ ಗರಿಮೆಯನ್ನು ಪಸರಿಸಲು ಉದ್ದೇಶಿಸಲಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ತನ್ನ ಹುಟ್ಟೂರು ಕಡೆಕಾರಿನಲ್ಲಿರುವ ಮನೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಯಪ್ರಕಾಶ್ ಶೆಟ್ಟಿ ತಿಳಿಸಿದರು.







