ನನ್ನ ಹೆಸರು ಏಕೆ ಸೇರಿದೆ ಗೊತ್ತಿಲ್ಲ: ಹರ್ಷ ಗುಪ್ತಾ
ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣ
ಬೆಂಗಳೂರು, ಮೇ 20: ಉತ್ತರಪ್ರದೇಶದ ಲಕ್ನೋದಲ್ಲಿ ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯಲ್ಲಿ ನನ್ನ ಹೆಸರು ಏಕೆ ಸೇರ್ಪಡೆಯಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ನನ್ನ ಒಳ್ಳೆಯ ಸಹೋದ್ಯೋಗಿ ಹಾಗೂ ಪ್ರಾಮಾಣಿಕ ವ್ಯಕ್ತಿ. ಅವರ ಸಾವಿನ ಸುದ್ದಿ ಕೇಳಿ ನನಗೂ ದುಃಖವಾಗಿದೆ ಎಂದರು.
ನಮ್ಮ ಇಲಾಖೆಯಲ್ಲಿ ಯಾವುದೇ 2 ಸಾವಿರ ಕೋಟಿ ರೂ.ಗಳ ಅಕ್ರಮ ನಡೆದಿಲ್ಲ. ಈ ಬಗ್ಗೆ ಆಯುಕ್ತರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಹಾಗೇನಾದರೂ ಅಕ್ರಮಗಳು ನಡೆದಿದ್ದರೆ, ನನಗೆ ಲಿಖಿತ ರೂಪದಲ್ಲಿ ಮಾಹಿತಿ ಸಿಗಬೇಕಿತ್ತು ಎಂದು ಅವರು ಹೇಳಿದರು.
ಅನುರಾಗ್ ತಿವಾರಿ ಸಾವಿನ ಜೊತೆಗೆ ನನ್ನ ಹೆಸರು ಏಕೆ ಸೇರಿದೆ ಎಂಬುದು ಅರ್ಥವಾಗುತ್ತಿಲ್ಲ. ಒಬ್ಬ ಅಧಿಕಾರಿಯ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಮುನ್ನ ಯೋಚಿಸಬೇಕು. ಇಲ್ಲದಿದ್ದರೆ, ಆಡಳಿತ ನಡೆಸುವುದು ಕಷ್ಟವಾಗುತ್ತದೆ ಎಂದು ಹರ್ಷಗುಪ್ತಾ ತಿಳಿಸಿದರು.
ಇಂತಹ ಆರೋಪಗಳಿಂದಾಗಿ ಕೇವಲ ನಮ್ಮ ಇಲಾಖೆ ಮಾತ್ರವಲ್ಲ, ಬೇರೆಯವರೂ ಆಡಳಿತ ನಡೆಸುವುದು ಕಷ್ಟವಾಗುತ್ತದೆ. ನಮ್ಮ ಇಲಾಖೆಯಲ್ಲಿ ನಕಲಿ ಪಡಿತರ ಕಾರ್ಡುಗಳ ಅಕ್ರಮವನ್ನು ತಡೆದಿದ್ದೇವೆ. ಆಹಾರ ವಿತರಣೆಯಲ್ಲಿ ಆಗುತ್ತಿದ್ದ ಅನೇಕ ಅಕ್ರಮಗಳಿಗೆ ಕಡಿವಾಣ ಹಾಕಿದ್ದೇವೆ ಎಂದು ಅವರು ಹೇಳಿದರು. ನಮ್ಮ ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಹಗರಣ ನಡೆದಿರುವ ಬಗ್ಗೆ ನನಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇವೆಲ್ಲಾ ಆಧಾರ ರಹಿತವಾದ ಸುದ್ದಿಗಳು ಎಂದು ಹರ್ಷಗುಪ್ತಾ ತಿಳಿಸಿದರು.







