ಸೌದಿ ಪೌರತ್ವ ವರದಿ ನಿರಾಕರಿಸಿದ ಝಾಕಿರ್ ನಾಯ್ಕ್

ಹೊಸದಿಲ್ಲಿ,ಮೇ 20: ಇಂಟರ್‌ಪೋಲ್‌ನಿಂದ ಬಂಧನವನ್ನು ತಪ್ಪಿಸಿಕೊಳ್ಳಲು ತನಗೆ ಸೌದಿ ಪೌರತ್ವವನ್ನು ಮಂಜೂರು ಮಾಡಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯ್ಕ್ ಅವರು ನಿರಾಕರಿಸಿದ್ದಾರೆ.
ಈ ಕುರಿತು ನಾಯ್ಕ್ ಅವರು ನೀಡಿರುವ ಹೇಳಿಕೆ ತನಗೆ ಲಭ್ಯವಾಗಿದೆ ಎಂದು ಸುದ್ದಿ ಜಾಲತಾಣ ‘ದಿ ಕ್ವಿಂಟ್’ ಹೇಳಿಕೊಂಡಿದೆ.
ದೊರೆ ಸಲ್ಮಾನ್ ಅವರು ನಾಯ್ಕ್ಗೆ ಸೌದಿ ಅರೇಬಿಯಾದ ಪೌರತ್ವ ಮಂಜೂರು ಮಾಡಿದ್ದಾರೆ ಎಂದು ಮಿಡ್ಲ್ ಈಸ್ಟ್ ಮಾನಿಟರ್ ವರದಿ ಮಾಡಿತ್ತು.
ಕಳೆದ ವರ್ಷ ಬಾಂಗ್ಲಾದೇಶದ ಢಾಕಾದ ರೆಸ್ಟೋರಂಟ್‌ವೊಂದರ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ನಾಯ್ಕ್ ಭಾರತಕ್ಕೆ ಅಪೇಕ್ಷಿತ ವ್ಯಕ್ತಿಯಾಗಿದ್ದಾರೆ. ದಾಳಿಯನ್ನು ನಡೆಸಲು ಭಯೋತ್ಪಾದಕರಿಗೆ ಪ್ರೇರಣೆ ನೀಡಿದ ಆರೋಪ ಅವರ ಮೇಲಿದೆ.
ಎನ್‌ಐಎ ಕಳೆದ ವರ್ಷದ ನವಂಬರ್‌ನಲ್ಲಿ ನಾಯ್ಕ್ ಮತ್ತು ಅವರ ಸಹವರ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ನಾಯ್ಕ್ ಸೌದಿ ಅರೇಬಿಯಾ ಅಥವಾ ಯುಎಇಯಲ್ಲಿ ಇದ್ದಾರೆ ಮತ್ತು ಮಲೇಶಿಯಾ-ಇಂಡೋನೇಶಿಯಾ ನಡುವೆ ಓಡಾಡುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.





