ಜಮೀನು ವಿಚಾರಕ್ಕೆ ತಂಗಿಯ ಕೊಲೆ: ದೂರು
ಬೆಂಗಳೂರು, ಮೇ 20: ಜಮೀನಿನ ವಿಚಾರಕ್ಕಾಗಿ ನಡೆದ ದಾಯಾದಿಗಳ ಕಲಹದಲ್ಲಿ ಅಕ್ಕಂದಿರಿಂದಲೇ ತಂಗಿ ಕೊಲೆಯಾಗಿರುವ ದುರ್ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಜ್ಯೋತಿ (24) ಮೃತ ಯುವತಿ ಎಂದು ಗುರುತಿಸಲಾಗಿದೆ.
ಜಮೀನಿನ ವಿಚಾರಕ್ಕೆ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಾದ ಸಿಲ್ವೇಪುರದ ಪ್ರೀತಿ, ದಿವ್ಯ ಬಾಲರಾಜ್ ಎನ್ನುವವರು ಸೇರಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ.
ಸಿಲ್ವೇಪುರದ ನಿವಾಸಿಗಳಾಗಿರುವ ಜ್ಯೋತಿ ಮತ್ತು ರವಿ ಎನ್ನುವವರ ಮಧ್ಯೆ ಮೊದಲು ಜಮೀನಿನ ವಿಷಯಕ್ಕಾಗಿ ಜಗಳವಾಗಿತ್ತು. ಈ ಸಮಯದಲ್ಲಿ ಜ್ಯೋತಿ ರವಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಳು. ರವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವಿಷಯ ತಿಳಿದ ಸಹೋದರಿಯರು ದೊಣ್ಣೆಗಳೊಂದಿಗೆ ಜ್ಯೋತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಚಿಕಿತ್ಸೆ ನೀಡಿಸಲು ಆಸ್ಪತ್ರೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.





