ಎಂಐಟಿ ಡೈಮಂಡ್ ಕಪ್ ಕ್ರಿಕೆಟ್: ಯುಸಿಎ-ಕೆಆರ್‌ಎಸ್ ಫೈನಲಿಗೆ
ಮಣಿಪಾಲ, ಮೇ 20: ಮಣಿಪಾಲ ಎಂಐಟಿಯ ವಜ್ರ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ, ಮಣಿಪಾಲ ವಿವಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಇದರ ಸಹಕಾರ ದೊಂದಿಗೆ ಮಣಿಪಾಲದಲ್ಲಿ ನಡೆಯುತ್ತಿರುವ 14, 16 ಮತ್ತು 19 ವರ್ಷ ಕೆಳ ಹರೆಯದ ಮಕ್ಕಳ ಅಂತರ್ ಕ್ಲಬ್ ಹಾರ್ಡ್‌ಬಾಲ್ ಕ್ರಿಕೆಟ್‌ಕೂಟದ 16 ವರ್ಷ ಕೆಳ ಹರೆಯದ ವಿಭಾಗದಲ್ಲಿ ಯುಸಿಎ ಹಾಗೂ ಕೆಆರ್‌ಎಸ್ ತಂಡಗಳು ಅಂತಿಮ ಹಂತವನ್ನು ಪ್ರವೇಶಿಸಿವೆ.
ಇಂದು ಜರಗಿದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯುಸಿಎ ತಂಡವು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ತಂಡದ ವಿರುದ್ಧ 5 ವಿಕೆಟ್‌ಗಳ ಅಂತರದ ಜಯವನ್ನು ಸಾಧಿಸಿತು.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತು ಕೆ.ಆರ್.ಎಸ್. ಕಟಪಾಡಿ ತಂಡಗಳ ನಡುವಿನ ಇನ್ನೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಕೆಆರ್‌ಎಸ್ ತಂಡವು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 18 ರನ್‌ಗಳ ಅಂತರದಿಂದ ಸೋಲಿಸಿತು.
19 ವರ್ಷ ಹರೆಯದ ವಿಭಾಗದಲ್ಲಿ ಚಕ್ರವರ್ತಿ ಕುಂದಾಪುರ ತಂಡವು ಉಡುಪಿ ಕ್ರಿಕೆಟ್ ಅಸೋಸಿಯೇಶನ್ ತಂಡದ ವಿರುದ್ಧ 18 ರನ್‌ಗಳ ಅಂತರದ ಜಯವನ್ನು ಸಾಧಿಸಿತು.
ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡವು ಉಡುಪಿ ಜಿಲ್ಲಾಕ್ರಿಕೆಟ್ ಅಸೋಸಿಯೇಶನ್ ತಂಡ ವನ್ನು 88 ರನ್‌ಗಳ ಅಂತರದ ಸೋಲಿಸಿತು.
14 ವರ್ಷ ಹರೆಯದ ವಿಭಾಗದಲ್ಲಿ ವಿಶ್ವ ವಿನಾಯಕ ತೆಕ್ಕಟ್ಟೆ ತಂಡವು ಕೆ.ಆರ್.ಎಸ್. ಕಟಪಾಡಿ ತಂಡವನ್ನು 5 ವಿಕೇಟುಗಳ ಅಂತರದಿಂದ ಸೋಲಿ ಸಿತು.
ಬ್ರಹ್ಮಾವರದಲ್ಲಿ ಜರಗಿದ ಇನ್ನೊಂದು ಪಂದ್ಯದಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ತಂಡವು ಹುಡುಗಿಯರ ತಂಡದ ವಿರುದ್ಧ 6 ವಿಕೇಟುಗಳ ಅಂತರದ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಬ್ರಹ್ಮಾವರ ತಂಡವು ಉಡುಪಿ ಕ್ರಿಕೆಟ್ ಎಸೋಸಿಯೇಶನ್ ತಂಡವನ್ನು 6 ರನ್‌ಗಳ ಅಂತರದಲ್ಲಿ ಸೋಲಿಸಿತು.