ಚರ್ಚೆಗೆ ಗ್ರಾಸವಾದ ವಿದ್ಯುತ್, ಶಿಕ್ಷಣ ಇಲಾಖೆ, ಅಕ್ರಮ ಕಟ್ಟಡ
ಸುಳ್ಯ ತ್ರೈಮಾಸಿಕ ಕೆಡಿಪಿ ಸಭೆ

ಸುಳ್ಯ ಮೇ 20: ವಿದ್ಯುತ್, ಶಿಕ್ಷಣ ಇಲಾಖೆ ಹಾಗೂ ನಗರ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳ ಬಗ್ಗೆ ಶನಿವಾರ ಶಾಸಕ ಅಂಗಾರ ನೇತೃತ್ವದಲ್ಲಿ ಜರಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಎಲಿಮಲೆ ಶಾಲಾ ಜಾಗ ಅತಿಕ್ರಮಣದ ಬಗ್ಗೆ ಜನಪ್ರತಿನಿಧಿಗಳ ವಿರುದ್ಧದ ಪೊಲೀಸ್ ದೂರಿನ ಬಗ್ಗೆ ಮುಂದಿನ ಹೆಜ್ಜೆ ಇರಿಸಲು ಜಂಟಿ ಸರ್ವೇ ನಡೆಸಿ, ಬಳಿಕ ಸ್ಥಾಯಿ ಸಮಿತಿ ಮೂಲಕ ತನಿಖೆ ಕೈಗೊಳ್ಳುವಂತೆ ಸಭೆ ನಿರ್ಣಯಿಸಿತು.
ಎಲಿಮಲೆ-ಅಂಬೆಕಲ್ಲು ರಸ್ತೆ ನಿರ್ಮಾಣ ಸಂದರ್ಭ ಸರಕಾರಿ ಶಾಲಾ ಜಾಗ ಅತಿಕ್ರಮಣವಾಗಿದೆ ಎಂದು ಪಂಚಾಯತ್ ಸದಸ್ಯರ ವಿರುದ್ಧ ಪೊಲೀಸ್ ದೂರು ನೀಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜನಪ್ರತಿನಿಧಿಗಳ ಬಗ್ಗೆ ಈ ರೀತಿ ಪೊಲೀಸ್ ದೂರು ನೀಡಲು ಅಧಿಕಾರ ನೀಡಿದವರು ಯಾರು? ಕೇಸು ದಾಖಲಾದರೆ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಈ ಬಗ್ಗೆ ಜಿಪಂ ಸದಸ್ಯ ಆಶಾ ತಿಮ್ಮಪ್ಪ, ರಾಧಾಕೃಷ್ಣ ಬೊಳ್ಳೂರು ಕೂಡಾ ಧ್ವನಿಗೂಡಿಸಿ ಚುನಾಯಿತರ ಮೇಲೆ ಈ ರೀತಿ ಕೇಸು ದಾಖಲಿಸಿದರೆ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಶಾಲಾ ಜಾಗದ ಬಗ್ಗೆ ಜಂಟಿ ಸರ್ವೆ ಮತ್ತು ಸ್ಥಾಯಿ ಸಮಿತಿಯ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಶಾಸಕರು ಸೂಚಿಸುವುದರೊಂದಿಗೆ ನಿರ್ಣಯ ಕೈಗೊಳ್ಳಲಾಯಿತು.
ನಗರದ ರಸ್ತೆ ಹಾಗೂ ನದಿ ಪರಂಬೋಕಿನಲ್ಲಿ ಮನೆ, ಕಟ್ಟಡಗಳ ನಿರ್ಮಾಣವಾಗುವ ಬಗ್ಗೆ ಶಾಸಕರು ನಗರಾಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭ ಹಿಂದಿನ ಜಿಲ್ಲಾಧಿಕಾರಿ ಪೊನ್ನುರಾಜ್‌ರ ಆದೇಶವನ್ನು ದುರುಪಯೋಗಪಡಿಸಿ ಮನೆಗಳ ನಿರ್ಮಾಣವಾಗಿದೆ ಎಂದರು. ಇದಕ್ಕುತ್ತರಿಸಿದ ಶಾಸಕರು, ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾದರೆ ಕೆಲವು ಬಾರಿ ನಿಷ್ಠುರವಾಗಿ ವರ್ತಿಸಬೇಕು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಗಂಗಾಕಲ್ಯಾಣ ಯೋಜನೆಯಲ್ಲಿ 7 ಕಾಮ ಗಾರಿ ಮಂಜೂರಾಗಿದ್ದು, ಎರಡು ಬಾಕಿ ಉಳಿದಿದೆ. ಗುತ್ತಿಗಾರಿನ ಸಬ್‌ಸ್ಟೇಷನ್ ಟೆಂಡರ್ ನಡೆದಿದೆ. ಅಪಾಯಕಾರಿ ವಿದ್ಯುತ್ ಕಂಬಗಳನ್ನು ಬದಲಿ ಸಲಾಗುತ್ತಿದೆ. 2014ರಲ್ಲಿ ಅನುದಾನ ಮಂಜೂರು ಗೊಂಡು 33 ಕೆ.ವಿ. ಲೈನ್‌ನ ತಂತಿ ಬದಲಾಯಿಸುವ 10 ಕಿ.ಮೀ. ಉದ್ದದ ಕಾಮಗಾರಿಗೆ 3.16 ಕೋ.ರೂ. ಮತ್ತೆ ಮಂಜೂರುಗೊಂಡಿದೆ. ಪ್ರತೀ ಐದು ಕಿ.ಮೀ.ಗೆ 11 ಟವರ್ ಇದ್ದಿದ್ದನ್ನು ಹೆಚ್ಚಿಗೆ ವಿಸ್ತರಿಸಿಲ್ಲ. ಈ ಕಾಮಗಾರಿ ಶೀಘ್ರ ಜರಗಲಿದೆ. ಕೌಡಿಚ್ಚಾರ್‌ನಿಂದ ಬೊಳುಬೈಲು ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ 33 ಕೆ.ವಿ. ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಅಳವಡಿಸಲು 5.25 ಕೋ.ರೂ. ಟೆಂಡರ್ ನಡೆದಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು. ಸುಳ್ಯದ 110 ಕೆ.ವಿ. ಬೇಡಿಕೆ ಬಗ್ಗೆಯೂ ಇಲಾಖೆಗೆ ಕಾಳಜಿಯಿಲ್ಲ. ಟೆಂಡರ್, ವೆಚ್ಚದ ಪಟ್ಟಿಯನ್ನು ತನಗೆ ನೀಡುವಂತೆ ಸೂಚಿಸಿದರು.
ತಹಶೀಲ್ದಾರ್ ಎಂ.ಎಂ. ಗಣೇಶ್ ಮಾತನಾಡಿ, 94 ಸಿಸಿಗೆ 8,108 ಅರ್ಜಿಗಳು ಬಂದಿದ್ದು 7,457 ಅರ್ಜಿ ವಿಲೇ ವಾರಿಯಾಗಿದೆ. 4,610 ಮಂಜೂರಾಗಿದ್ದು, 2,971 ತಿರಸ್ಕೃತಗೊಂಡಿವೆ. ಹಣ ಕಟ್ಟದಿರುವ 1,428 ಮಂದಿಗೆ ಹಕ್ಕುಪತ್ರ ನೀಡಲು ಬಾಕಿಯಿದೆ. 94 ಸಿಸಿಯಲ್ಲಿ 819 ಅರ್ಜಿ ಬಂದಿವೆ ಎಂದು ತಿಳಿಸಿದರು. ಈ ಸಂದರ್ಭ ರಾಧಾಕೃಷ್ಣ 4-5 ಎಕರೆ ಜಾಗ ಇರುವವರಿಗೂ 94 ಸಿಸಿಯಡಿ ಹಕ್ಕುಪತ್ರ ನೀಡಲಾಗಿದೆ ಎಂದು ಆರೋಪಿಸಿದರು. ತಾಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ 3 ಬೆಡ್‌ಗಳ ಐಸಿಯು ಘಟಕ, ಕ್ಯಾಂಟೀನ್ ಶೌಚಾಲಯಗಳಿಗೆ ಅನುಮೋದನೆಯಾಗಿದೆ. ಔಷಧಗಳ ದಾಸ್ತಾನು ಬೇಡಿಕೆಗೆ ತಕ್ಕಂತಿದೆ ಎಂದರು.
ಅರಣ್ಯ ಇಲಾಖೆಯ ವತಿಯಿಂದ ಸೋಲಾರ್ ಲ್ಯಾಂಪ್‌ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ 500 ಗ್ಯಾಸ್ ಸಂಪರ್ಕ ವಿತರಿಸಲು ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆಯಾಗಿದೆ. ಈ ಬಗ್ಗೆ ಪ್ರತಿ ಪಂಚಾಯತ್‌ಗಳಲ್ಲಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯವಾಗಬೇಕು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿವಿಧ ಇಲಾಖಾಧಿಕಾರಿ ಉಪಸ್ಥಿತರಿದ್ದರು. ಕೆಡಿಪಿ ಸಭೆಯಲ್ಲಿ ಭೂತಕಲ್ಲು ಶಾಲೆಯ ಬಗ್ಗೆ ಚರ್ಚೆ
ಶಾಲೆಯ ವಿಚಾರಗಳಲ್ಲಿ ಯಾವುದೇ ರಾಜಕೀಯ ಸಲ್ಲದು. ಆದರೆ ಭೂತಕಲ್ಲು ಶಾಲೆಯ ಕುರಿತಾಗಿ ಪತ್ರಿಕೆಗಳಲ್ಲಿ ಈ ವಿಚಾರ ವರದಿಯಾಗಿದೆ ಎಂದು ಜಿಪಂ ಸದಸ್ಯ ಹರೀಶ್ ಕಂಜಿಪಿಲಿ ಪ್ರಸ್ತಾವಿಸಿದರು.
ಈ ಸಂದರ್ಭ ಉತ್ತರಿಸಿದ ಬಿಇಒ ಕೆಂಪಲಿಂಗಪ್ಪ, ಭೂತಕಲ್ಲು ಶಾಲೆ 2015 -16ರಲ್ಲಿ ಶೂನ್ಯ ದಾಖಲಾತಿಯಾಗಿದ್ದರಿಂದ ಶಾಲಾ ಪೀಠೋಪಕರಣಗಳನ್ನು ಮತ್ತು ಶಾಲಾ ದಾಖಲಾತಿಗಳನ್ನು ಸಿಆರ್‌ಪಿ ಹಾಗೂ ಪೋಷಕರ ಸಮ್ಮುಖ ಬೇರೆಡೆ ವರ್ಗಾಯಿಸಿದ್ದು ಆರ್‌ಸಿಸಿ ಕೊಠಡಿಯಲ್ಲಿ ಭದ್ರವಾಗಿರಿಸಲಾಗಿದೆ ಎಂದರು. ವರ್ಗಾವಣೆಗೆ ಮೊದಲು ಎಸ್‌ಡಿಎಂಸಿ ಅಧ್ಯಕ್ಷರ ಮನೆಗೆ ತಾನು, ಮುಖ್ಯಶಿಕ್ಷಕರು ಹಾಗೂ ಸಿಆರ್‌ಪಿಯವರು ಭೆೇಟಿ ಕೊಟ್ಟಾಗ ಅವರು ಮನೆಯಲ್ಲಿರಲಿಲ್ಲ. ಅವರ ತಮ್ಮನಿಗೂ ತಿಳಿಸಿದ್ದೆವು. ವರ್ಗಾವಣೆಗೆ ಮೊದಲು ರಾಷ್ಟ್ರಧ್ವಜದಿಂದ ಹಿಡಿದು ಲೋಟದ ವರೆಗೆ ಎಲ್ಲಾ ವಸ್ತುಗಳನ್ನು ಪಟ್ಟಿಮಾಡಿದ್ದೇವೆ. ಗ್ಯಾಸ್ ಸಿಲಿಂಡರ್ ಮಾತ್ರ ಇತರೆ ಶಾಲೆಗೆ ಹಂಚಿ ಕೆಯಾಗಿದೆ. ಯಾವುದೇ ಸಮಯದಲ್ಲಿ ಶಾಲೆ ಪುನಾರಂಭಿಸುವುದಕ್ಕೆ ಅಡ್ಡಿಯಿಲ್ಲ ಎಂದರು.







