‘ಖೈರಿಯಾ ಶೆಲ್ಟರ್ಸ್’ನ ನೂತನ ಮಹಡಿ ಉದ್ಘಾಟನೆ

ಉಳ್ಳಾಲ, ಮೇ 21: ಇಂದು ಶಿಕ್ಷಣವಿದ್ದರೆ ಮಾತ್ರ ನಾವು ಸಮಾಜದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿ ನಿಲಯ(ಖೈರಿಯಾ ಶೆಲ್ಟರ್ಸ್) ದೀನ್ ವಿದ್ಯಾಭ್ಯಾಸದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಮೂಲಕ ಬಡ ಹೆಣ್ಣುಮಕ್ಕಳಿಗೆ ಆಸರೆಯಾಗಿ ನಿಂತು ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತಿದೆ ಎಂದು ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ‘ಖೈರಿಯಾ ಶೆಲ್ಟರ್ಸ್’ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿ ನಿಲಯದ 8ನೆ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಾಣವಾದ ಎರಡನೆ ಮಹಡಿ ಕಟ್ಟಡದದ ಉದ್ಘಾಟನೆಯನ್ನು ರವಿವಾರ ನೆರವೇರಿಸಿ ಮಾತನಾಡುತ್ತಿದ್ದರು.
ಒಂದು ಯತಿಂಖಾನವನ್ನು ನಡೆಸುವುದು ಅದು ಸುಲಭವಾದ ಕೆಲಸವಲ್ಲ. ಎಸ್.ಎಂ.ರಶೀದ್ ಹಾಜಿಯವರು ಖೈರಿಯಾ ಟ್ರಸ್ಟ್ ಮೂಲಕ ಇಲ್ಲಿಯ ಮಕ್ಕಳಿಗೆ ಬಹಳಷ್ಟು ಅನುಕೂಲಕರ ವಾತಾವರಣದೊಂದಿಗೆ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಪ್ರತಿ ಜಮಾಅತ್ ವ್ಯಾಪ್ತಿಯಲ್ಲಿ ಬಡವರನ್ನು ಗುರುತಿಸಿ ಸಹಾಯವನ್ನು ಮಾಡುತ್ತಾ ಬಂದರೆ ಸಮಾಜದಲ್ಲಿ ಯಾರೂ ಹಸಿವಿನಿಂದ ಕಂಗೆಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಿರಿವಂತರು ಸಮಾಜದ ಬಡವರ್ಗದ ಬಗ್ಗೆ ಮುತುವರ್ಜಿ ವಹಿಸಬೇಕು ಎಂದರು.
ಸಮಾರಂದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಟ್ರಸ್ಟ್‌ನ ಎಲ್ಲ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಖೈರಿಯಾ ಶೆಲ್ಟರ್ಸ್ ಮೂಲಭೂತ ಸೌಲ್ಯಗಳೊಂದಿಗೆ ಮುನ್ನಡೆಯಲು ಸಹಕಾರಿಯಾಗಿದೆ. ಅಲ್ಲದೆ ಇಲ್ಲಿಯ ವಿದ್ಯಾರ್ಥಿನಿಯರು ಕೂಡಾ ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಗೂ ಕೀರ್ತಿ ತಂದಿದ್ದಾರೆ. ಇಲ್ಲಿಯವರೆಗೆ ಇಲ್ಲಿ ಸುಮಾರು 70 ವಿದ್ಯಾರ್ಥಿನಿಯರಿಗೆ ವ್ಯವಸ್ಥೆ ಕಲಿಸಲಾಗಿತ್ತು. ನೂತನ ಮಹಡಿ ಆಗಿದ್ದರಿಂದ ಇನ್ನು ಮುಂದೆ 100 ಬಡ ವಿದ್ಯಾರ್ಥಿನಿಯರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಯರನ್ನು ಗೌರವಿಸಲಾಯಿತು.
ಆಹಾರ ಸಚಿವ ಯು.ಟಿ.ಖಾದರ್, ಹಿರಾ ಮಹಿಳಾ ಕಾಲೇಜಿನ ಅಧ್ಯಕ್ಷ ಎ.ಎಚ್.ಮಹಮ್ಮೂದ್, ಟ್ರಸ್ಟಿ ಬಿ.ಅಬ್ದುಲ್ಲಾ ಕುಂಞಿ, ಎಚ್.ಎಚ್.ಗ್ರೂಪ್ ನ ಕುಂಞಿ ಅಹ್ಮದ್, ಟ್ರಸ್ಟಿಗಳಾದ ಡಾ.ಪಿ.ಎಸ್.ಅಮೀರ್ ಅಲಿ, ಅಬೂಬಕರ್ ಸಿದ್ದೀಕ್, ಬಿ.ಎಸ್.ಮುಹಮ್ಮದ್ ಬಶೀರ್, ಮನ್ಸೂರ್ ಅಹ್ಮದ್, ಮಹಮ್ಮದ್ ಅಶ್ರಫ್, ಎಂ.ಮಜೀದ್, ಹಾರಿಸ್ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಬಲ್ಕೀಸ್ ಸ್ವಾಗತಿಸಿದರು. ಶಮೀಮಾ ವಂದಿಸಿದರು. ಹನ್ನತ್ ಕಾರ್ಯಕ್ರಮ ನಿರೂಪಿಸಿದರು.







