ಜಾರ್ಖಂಡ್ ಹತ್ಯೆ: ಕರಾಳ ಮುಖ ಅನಾವರಣ
ಕಟ್ಟಿದ ಕೈ, ರಕ್ತಸಿಕ್ತ ದೇಹ, ಪ್ರಾಣಭಿಕ್ಷೆ ಬೇಡುತ್ತಿದ್ದ ಸಂತ್ರಸ್ತ

ರಾಂಚಿ, ಮೇ 20: ಗ್ರಾಮಸ್ಥರಿಂದ ಹತ್ಯೆಗೀಡಾದ ಮುಹಮ್ಮದ್ ನಯೀಮ್ ಅವರ ಜೀವನದ ಅಂತಿಮ ಕ್ಷಣಗಳ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ. ತಲೆಯಿಂದ ರಕ್ತ ಸೋರುತ್ತಿದೆ. ನಯೀಮ್ ದೇಹ ರಕ್ತದಿಂದ ಒದ್ದೆಯಾಗಿದೆ. ಅಂಗಿ ಹರಿದು ಚೂರುಚೂರಾಗಿದೆ. ಹರಿದ ಪ್ಯಾಂಟ್ ಅವರ ಮೇಲೆ ಆಗಿರುವ ಭೀಕರ ಹಲ್ಲೆಯ ಕಥೆ ಹೇಳುತ್ತದೆ. ಕೈಗಳನ್ನು ಕಟ್ಟಿಹಾಕಲಾಗಿದೆ. ಮೂರು ಮಕ್ಕಳ ತಂದೆ, ತಮ್ಮ ಅಮಾಯಕತೆಯನ್ನು ಮನದಟ್ಟು ಮಾಡಲು ಹರಸಾಹಸ ಮಾಡುತ್ತಿದ್ದಾರೆ.
ಆದರೆ ಗ್ರಾಮಸ್ಥರು ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದರು.
ಜಾರ್ಖಂಡ್‌ನ ಜನನಿಬಿಡ ಜೆಮ್ಷೆಡ್‌ಪುರ ನಗರಕ್ಕೆ ಮಗ್ಗುಲಲ್ಲೇ ಇರುವ ಶೋಭಾಪುರ ಗ್ರಾಮದಲ್ಲಿ ಗ್ರಾಮಸ್ಥರು ನಾಲ್ವರನ್ನು ಗುರುವಾರ ಹೊಡೆದು ಸಾಯಿಸಿದ್ದು, ಹೀಗೆ ಸಾವಿಗೀಡಾದವರಲ್ಲಿ ನಯೀಮ್ ಕೊನೆಯವರು. 20 ಕಿಲೋಮೀಟರ್ ದೂರದಲ್ಲಿ ಮತ್ತೆ ಮೂವರನ್ನು ಅಮಾನುಷವಾಗಿ ಸಾಯಿಸಲಾಗಿದೆ.
ರಾಜ್ಯದಲ್ಲಿ ಮಕ್ಕಳ ಅಪಹರಣ ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂದು ವಾಟ್ಸ್ ಆ್ಯಪ್ ಸಂದೇಶ ಹರಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಮಾನುಷ ಹಲ್ಲೆಗಳ ಚಿತ್ರಣ ನಯೀಮ್ ಹತ್ಯೆ ಮೂಲಕ ಅನಾವರಣಗೊಂಡಿದೆ. ಸರಾಯ್‌ಕೆಲ- ಖಾರ್ಸಾವನ್, ಪೂರ್ವ ಸಿಂಗ್‌ಭುಮ್ ಹಾಗೂ ಪಶ್ಚಿಮ ಸಿಂಗ್‌ಭುಮ್ ಜಿಲ್ಲೆಗಳ ಜನ, ಅದರಲ್ಲೂ ಪ್ರಮುಖವಾಗಿ ಬುಡಕಟ್ಟು ಜನರು ದೊಣ್ಣೆ, ಬ್ಯಾಟ್‌ನಂಥ ಶಸ್ತ್ರಾಸ್ತ್ರಗಳ ಮೂಲಕ ಆಗಂತುಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಶೋಭಾಪುರ ಕೂಡಾ ಸರಾಯ್‌ಕೆಲ- ಖಾರ್ಸಾವನ್ ಜಿಲ್ಲೆಯ ಗ್ರಾಮ.
ಈ ವಾರದ ಆರಂಭದಲ್ಲಿ ಇಂಥದ್ದೇ ಸಂದೇಹದಿಂದ ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ಆದರೆ ಯಾವ ಸಂತ್ರಸ್ತರು ಕೂಡಾ ಅಪಹರಣ ಪ್ರಕರಣದಲ್ಲಿ ಶಾಮೀಲಾಗಿರಲಿಲ್ಲ.
2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಟೈಲರ್ ಕುತ್ಬುದ್ದೀನ್ ಅನ್ಸಾಲಿ ಎಂಬ ದರ್ಜಿ, ದಾಳಿಕೋರರ ಗುಂಪಿನಲ್ಲಿ ಪ್ರಾಣಭಿಕ್ಷೆ ಬೇಡುತ್ತಿರುವ ದಯನೀಯ ಚಿತ್ರಣವನ್ನು ನಯೀಮ್ ಚಿತ್ರಗಳು ನೆನಪಿಸುತ್ತವೆ. ಆದರೆ ಅನ್ಸಾರಿಯವರನ್ನು ರಕ್ಷಿಸಲಾಗಿತ್ತು.
ಪೂರ್ವ ಸಿಂಗ್‌ಭುಮ್ ಜಿಲ್ಲೆಯ ಘಾಟ್ಸಿಲಾ ಗ್ರಾಮದ ನಿವಾಸಿ ನಯೀಮ್ ಹಾಗೂ ಆತನ ಹಸು ವ್ಯಾಪಾರಿ ಸಹಚರರು ಗುರುವಾರ ಮುಂಜಾನೆ ಶೋಭಾಪುರ ಗ್ರಾಮದ ಬಳಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಟಾಟಾ- ಚೈಬಸಾ ರಸ್ತೆಯಲ್ಲಿ ಇವರ ವಾಹನವನ್ನು ತಡೆದ ಗ್ರಾಮಸ್ಥರು, ನಾಲ್ವರನ್ನು ವಾಹನದಿಂದ ಎಳೆದು ಹಾಕಿದ್ದರು. ಸಾಯಿಸುವ ಮುನ್ನ ನಾಲ್ಕು ಗಂಟೆ ಚಿತ್ರಹಿಂಸೆ ನೀಡಿದ್ದರು.
ಚಿತ್ರಹಿಂಸೆಗೆ ಒಳಗಾಗಿ ಸತ್ತವರಲ್ಲಿ ನಯೀಮ್ ಕೊನೆಯವರು. ಕೊನೆಯ ಪ್ರಹಾರಕ್ಕೆ ಮುನ್ನ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಇದ್ದ ಕಾರಣ ಯಾವುದೇ ಪ್ರಯೋಜನವಾಗಲಿಲ್ಲ.
ನಯೀಮ್ ಅವರದ್ದು ಅನುಕರಣೀಯ ವ್ಯಕ್ತಿತ್ವ. ವೃದ್ಧ ಪೋಷಕರನ್ನು ಆತ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಮಕ್ಕಳನ್ನೂ ಚೆನ್ನಾಗಿ ಬೆಳೆಸಿದಿದ್ದರು. ನಯೀಮ್ ಪತ್ನಿ, ಆ ಗ್ರಾಮದ ಉಪ ಮುಖ್ಯಸ್ಥೆ ಎಂದು ಬಾವ ಜಲಾವುದ್ದೀನ್ ಹೇಳಿದ್ದಾರೆ.
ಜಿಲ್ಲಾಡಳಿತ ಘೋಷಿಸಿದ 2 ಲಕ್ಷ ರೂಪಾಯಿ ಪರಿಹಾರ ಸ್ವೀಕರಿಸಲು ನಯೀಮ್ ಕುಟುಂಬ ನಿರಾಕರಿಸಿದೆ. ಮುಖ್ಯಮಂತ್ರಿ ಸ್ವತಃ ಭೇಟಿ ನೀಡಿ, ನ್ಯಾಯದ ಭರವಸೆ ನೀಡಬೇಕು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.







