ಜನಪ್ರತಿನಿಧಿಗಳು ಜನರ ಪ್ರೀತಿ, ವಿಶ್ವಾಸವನ್ನು ಗಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಮುಖ್ಯ-ಬಿ.ರಮಾನಾಥ ರೈ
ಮಂಗಳೂರು ತಾ. ಪಂ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು, ಮೇ 21: ತನ್ನನ್ನು ಆಯ್ಕೆ ಮಾಡಿದ ಜನರ ಪ್ರೀತಿ ವಿಶ್ವಾಸವನ್ನು ಗಳಿಸುವ ರೀತಿಯಲ್ಲಿ ಜನಪ್ರತಿನಿಧಿ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಮಂಗಳೂರು ತಾಲೂಕು ಪಂಚಾಯತ್‌ಗೆ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ತಾಲೂಕು ಪಂಚಾಯತ್‌ಗೆ ಶಿಲಾನ್ಯಾಸವನ್ನು ಹಾಲಿ ಕಚೇರಿಯ ಆವರಣದಲ್ಲಿ ನೆರವೇರಿಸಿ ಮಾತನಾಡುತ್ತಿದ್ದರು.
ಸರಕಾರಿ ಕಟ್ಟಡ ಜನತೆಯ ಅಭಿವೃದ್ಧಿಗೆ ಪೂರಕವಾದ ಕೆಲಸವನ್ನು ಮಾಡಲು ಜನಪ್ರತಿನಿಧಿಗಳ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿ ಎಂದು ಶುಭಹಾರೈಸಿದರು.
ಸಕರಾರದ ಯೋಜನೆಯನ್ನು ಜನರ ಬಳಿಗೆ ತಲುಪಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳಿಗೂ ಇದೆ:- ಸರಕಾರದ ಯೋಜನೆಗಳನ್ನು ಜನರ ಬಳಿ ತಲುಪಿಸುವ ಹೊಣೆಗಾರಿಕೆ ಕೇವಲ ಅಧಿಕಾರಿಗಳ ಹೊಣೆಗಾರಿಕೆಯಲ್ಲ ಜನಪ್ರತಿನಿಧಿಗಳ ಹೊಣೆಗಾರಿಕೆಯೂ ಇದೆ ಎನ್ನುವುದನ್ನು ಮರೆಯಬಾರದು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ತಿಳಿಸಿದರು.
ಜನರ ಬಳಿಕೆ ಓಟಿಗಾಗಿ ಮತಯಾಚಿಸುವ ಜನಪ್ರತಿನಿಧಿಗಳು ಅವರಿಂದ ಮತ ಪಡೆದ ಬಳಿಕ ಅವರ ಬಳಿಗೆ ಸರಕಾರದ ಯೋಜನೆಯನ್ನು ತಲುಪಿಸುವ ಮೂಲಕ ಆತನಿಗೆ ಸಹಕಾರ ನೀಡವುದು ಕರ್ತವ್ಯವೆಂದು ತಿಳಿಯಬೇಕು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಸಾಕಷ್ಟು ಮಹಿಳೆಯರಿಗೆ ಅಧಿಕಾರ ದೊರೆತಿದೆ. ಹೊಸ ಯುವ ಜನಪ್ರತಿನಿಧಿಗಳು ಅವಕಾಶ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರ ಕುಡಿಯುವ ನೀರು, ಉತ್ತಮ ಶಿಕ್ಷಣ, ಸಣ್ಣ ಮಕ್ಕಳ ಪೌಷ್ಠಿಕ ಆಹಾರ, ಆರೋಗ್ಯ ಸೌಲಭ್ಯ ಒದಗಿಸಲು ಶ್ರಮಿಸ ಬೇಕಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದರು.
ಒಂದನೆ ತರಗತಿಯಿಂದಲೇ ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಬೇಕು ಎನ್ನುವ ಸರಕಾರದ ನಿರ್ಧಾರವನ್ನು ತಾನು ಸ್ವಾಗತಿಸುವುದಾಗಿ ಐವನ್ ಡಿ ಸೋಜ ತಿಳಿಸಿದರು. ಸುಮಾರು 60ವರ್ಷ ಹಳೆಯ ಕಟ್ಟಡವನ್ನು ಕೆಡವಿ 2628 ಚದರ ಮೀಟರ್ ವಿಸ್ತಿರ್ಣದಲ್ಲಿ 657 ಚದರ ಮೀಟರ್ ವಿಸ್ತೀರ್ಣದ ಕಟ್ಟಡ ನಿರ್ಮಾಣ ಸರಕಾರದಿಂದ 350ಲಕ್ಷ ರೂ ಮಂಜೂರಾಗಿದೆ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನ್ಹೊ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಧನಲಕ್ಷ್ಮೀ ಗಟ್ಟಿ, ಯು.ಬಿ.ಇಬ್ರಾಹೀಂ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಕಾರಿ ಅಭಿಯಂತರ ಸುಜನ್ ರಾವ್, ಕಾರ್ಯನಿರ್ವಹಣಾಧಿಕಾರಿ ಜಿ.ಸದಾನಂದ ಮೊದಲಾದವರು ಉಪಸ್ಥಿತರಿದ್ದರು.







